ಬೆಂಗಳೂರು:(ಫೆ12): ಪ್ರತಿಭಟನೆ ಅಂದ್ರೆ ಕೂಗುಗಳು ಘೋಷಣೆಗಳು ಕೇಳಿ ಬರುತ್ತವೆ, ಆದ್ರೆ ಇವರದ್ದು ಮೌನ ಪ್ರತಿಭಟನೆ. ಈ ಮೌನ ಪ್ರತಿಭಟನೆಗೆ 14 ವರ್ಷಗಳು ಕಳೆದಿವೆ. ನ್ಯಾಯ ಸಿಗುವವರೆಗೂ ಮೌನಿಯಾಗಿಯೆ ನಿರಂತರ ಪ್ರತಿಭಟನೆ ನಡೆಸುತ್ತೇನೆಂಬುವುದು ಇವರ ದಿಟ್ಟ ನಿರ್ಧಾರ.

ಇವರ ಹೆಸರು ಅಂಬ್ರೋಸ್ ಡಿ ಮೆಲ್ಲೊ, ಇವರು ಬೆಂಗಳೂರಿನ ನ್ಯೂ ಮಿಶೆನ್ ರಸ್ತೆಯ ನಿವಾಸಿಯಾಗಿದ್ದಾರೆ. ಇವರಿಗೆ ಸ್ವಂತ ಮನೆ, ಹೆಂಡತಿ, ಮಕ್ಕಳಿಲ್ಲ. 2000 ರಲ್ಲಿ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಕೈ ಸನ್ನೆ, ಕಾಗದದ ಮೇಲೆ ಬರೆಯುವುದು, ಇನ್ನು ಕೆಲವು ಹಾವಭಾವದಿಂದ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ.

ಅಂಬ್ರೋಸ್ ಡಿ ಮೆಲ್ಲೊ ಅವರು ಮೂರು ಬಾರಿ ವಿಧಾನಸಭೆಯ ಚುನಾವಣೆಗೆ, ನಾಲ್ಕು ಬಾರಿ ಲೋಕಸಭೆಯ ಚುನಾವಣೆಗೆ ಬೇರೆ-ಬೇರೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹಾಗೆಯೇ 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಎದುರು ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇನ್ನು ಬಿಸ್ಲರಿ ವಾಟರ್ ಮಾರಾಟದ ವಿರುದ್ಧ, ಹಳೆ ನೋಟುಗಳ ರದ್ಧತಿಯ ವಿರುದ್ಧ, ಸ್ವಚ್ಚ ಭಾರತ ಅಭಿಯಾನ ಪ್ರಚಾರಕ್ಕಾಗಿ ಎಂದು ಟೀಕಿಸುವುದರ ಮೂಲಕ ಇವುಗಳ ವಿರುದ್ಧ ನಿರಂತರ ಮೌನ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.

ಇನ್ನು ಈಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಪುಸ್ತಕಗಳ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೇಳದಲ್ಲಿಯೂ ಕೂಡ ಇವ್ರ ಮೌನ ಪ್ರತಿಭಟನೆ ನಿರಂತರವಾಗಿ ಸಾಗಿದೆ. ಯಾವ ವಿಚಾರಕ್ಕೆ ಅಂದುಕೊಂಡ್ರಾ, ಅವರು ಈ ಮೇಳದಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದು, ಹಳೆ ನೋಟನ್ನು ಕೊಟ್ರೆ ಮಾತ್ರ ಇವರ ಹತ್ತಿರ ಪುಸ್ತಕವನ್ನು ಖರೀದಿಸ ಬಹುದು. ಹೊಸ ನೋಟನ್ನು ಕೊಟ್ರೆ ನಾನು ಪುಸ್ತಕವನ್ನು ಕೊಡುವುದಿಲ್ಲ ಎನ್ನುತ್ತಾರೆ.

ಇವರು ಚಪ್ಪಲಿಯನ್ನು ಧರಿಸುವುದಿಲ್ಲ ಆದರೆ ಚಪ್ಪಲಿಯನ್ನೆ ಚಿಹ್ನೆಯಾಗಿಸಿಕೊಂಡಿದ್ದರು. ಇನ್ನು ಅನ್ಯಾಯದ ವಿರುದ್ಧ ಇವರು ಮಾಡುವ ಮೌನ ಪ್ರತಿಭಟನೆ ನಿಜಕ್ಕೂ ಅದ್ಭುತವೇ.