ಬೆಂಗಳೂರು(ಜು:24): ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಹೊಸ ಸರ್ಕಾರ ರಚನೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಗುರುವಾರದಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಎಂದು ತಿಳಿದುಬಂದಿದೆ.

ಮಂಗಳವಾರದಂದು ನಡೆದ ವಿಶ್ವಾಸಮತ ಯಾಚನೆಗೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಮಮಾರ್ಗದಿಂದ ಸರ್ಕಾರ ರಚಿಸಿದವರು ಬಹಳ ಕಾಲ ಅಧಿಕಾರದಲ್ಲಿ ಉಳಿದಿಲ್ಲ. ಈಗ ನೀವು ಸರ್ಕಾರ ರಚಿಸಿದರೂ ಒಂದು ವರ್ಷಕ್ಕಿಂತ ಅಧಿಕ ಕಾಲ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದಿದ್ದಾರೆ.

ಶಾಸಕರು ರಾಜೀನಾಮೆ ನೀಡಿರುವುದರ ಹಿಂದೆ ನಮ್ಮ ಕೈವಾಡವಿಲ್ಲವೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಇದನ್ನು ಮಾಡುತ್ತಿರುವುದು ಅವರೇ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ, ಶಾಸಕರಿಗೆ 25ರಿಂದ 30 ಕೋಟಿ ರೂಪಾಯಿ ಕೊಟ್ಟು ಅವರನ್ನು ಖರೀದಿಸಲು ಹಣ ಎಲ್ಲಿಂದ ಬಂತು ಎಂಬ ವಿಚಾರವನ್ನು ಬಿಜೆಪಿ ನಾಯಕರು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.