ಬೆಂಗಳೂರು(ಜ.19): ಬಹುಭಾಷಾ ನಟ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡುವುದರ ಮೂಲಕ ಚಂದನವನದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದ ನಟಿ ಶೃತಿ ಹರಿಹರನ್, ಸರ್ಜಾ ಕುಟುಂಬದ ಕುಡಿಯಾದ ಚಿರಂಜೀವಿ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಕೆ.ಎಂ.ಚೈತನ್ಯ ನಿರ್ದೇಶನದ ಆದ್ಯ ಸಿನಿಮಾ ಕಾರಣಾಂತರದಿಂದ ನಿಂತು ಹೋಗಿತ್ತು. ಕಳೆದ ವರ್ಷವೇ ಈ ಸಿನಿಮಾದಲ್ಲಿ ನಟಿಸಲು ನಟ ಚಿರಂಜೀವಿ ಸರ್ಜಾ ಮತ್ತು ಶ್ರುತಿ ಹರಿಹರನ್ ಒಪ್ಪಿಗೆ ಸೂಚಿಸಿದ್ದರು. ಹಾಗೆಯೇ ಕೆಲವು ದಿನಗಳ ಕಾಲ ಶೂಟಿಂಗ್ ಕೂಡ ಆಗಿತ್ತು. ಆದರೆ ಅರ್ಧಕ್ಕೆ ಈ ಸಿನಿಮಾ ನಿಂತು ಹೋಗಿತ್ತು. ಈಗ ಮತ್ತೆ ಈ ಸಿನಿಮಾವನ್ನು ಮಾಡಲು ಚಿರಂಜೀವಿ ಸರ್ಜಾ ಮತ್ತು ಶೃತಿ ಹರಿಹರನ್ ನಿರ್ಧಾರ ಮಾಡಿದ್ದಾರೆ.

ಇನ್ನು ಶೃತಿ ಹರಿಹರನ್ ಪಾತ್ರದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಮಾತ್ರ ಬಾಕಿ ಇದೆ. ಅದನ್ನು ಮುಗಿಸಲು ಶೃತಿ ಒಪ್ಪಿಗೆ ಸೂಚಿಸಿದ್ದಾರೆ. ಹಾಗೇಯೇ ಚಿರಂಜೀವಿ ಸರ್ಜಾ ಅವರ ಕೆಲವು ದಿನಗಳ ಶೂಟಿಂಗ್ ಬಾಕಿ ಉಳಿದ ಕಾರಣ ಮಾರ್ಚ್ ತಿಂಗಳಿನಲ್ಲಿ ಐದು ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದಾರೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ಅವರು ಹೇಳಿದ್ದಾರೆ.

ಒಟ್ಟಾರೆ ಮೀಟೂ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ಧಿಯಾದ ಶೃತಿ ಹರಿಹರಣ್ ಮತ್ತೆ ಸರ್ಜಾ ಕುಟುಂಬದವರ ಜೊತೆ ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯ ಮೂಡಿಸಿದೆ.