ಬೆಂಗಳೂರು:(ಫೆ12): ವ್ಯಾಲೆಂಟೈನ್ಸ್ ಡೇ ಗೆ ಒಂದೇ ದಿನ ಬಾಕಿಯಿದೆ. ಪ್ರೇಮಿಗಳಿಗಂತೂ ಫ್ರೆ 14 ಹಬ್ಬದ ದಿನ, ಆದರೀಗಾ ಒಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಅದೇನಪ್ಪ ಅಂದ್ರೆ ಖಾಸಗಿ ಶಾಲೆಗಳಲ್ಲಿ ವ್ಯಾಲೆಂಟೈನ್ಸ್ ಡೇ ಗೆ ಬ್ರೇಕ್ ಬಿದ್ದಿದೆ. ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆ ಖಾಸಗಿ ಶಾಲೆಗಳಿಗೆ ಸೂಚನೆ ನೀಡುವುದರ ಜೊತೆಗೆ ಮಾರ್ಗ ಸೂಚಿಯನ್ನು ಹೊರಡಿಸಲಾಗಿದೆ.

ಇತ್ತೀಚೆಗೆ ಶಾಲಾ ಕಾಲೇಜುಗಳಲ್ಲಿಯೂ ಪ್ರೇಮ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜೀವಗಳು ಬಲಿಯಾಗುತ್ತಿವೆ. ಇದರಿಂದ ರಾಜ್ಯದ ಖಾಸಗಿ ಶಾಲೆಗಳಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುವಂತಿಲ್ಲ ಎಂಬ ಸೂಚನೆಯನ್ನು ಹೊರಡಿಸಲಾಗಿದೆ.

ಶಾಲೆಗಳಲ್ಲಿ ಅಪ್ರಾಪ್ತ ವಯಸ್ಸಿನಲ್ಲಿಯೇ ಪ್ರೀತಿ ಪ್ರೇಮಗಳು ನಡೆಯುತ್ತಿದ್ದು, ಇದರಿಂದ ಮಕ್ಕಳು ದೈಹಿಕ ಹಾಗೂ ಮಾನಸಿಕ ಒತ್ತಡಗಳಿಗೆ ಒಳಗಾಗುವುದರ ಜೊತೆಗೆ ಹೊಡೆದಾಟ ಕೊಲೆಗಳು ಹೆಚ್ಚಾಗುತ್ತಿವೆ.

ಇದರಿಂದ ಪೋಷಕರು ಮಕ್ಕಳ ಮೇಲೆ ಎಚ್ಚರವಹಿಸ ಬೇಕು. ಪ್ರೇಮಿಗಳ ದಿನದ ಅಂಗವಾಗಿ ವಿದ್ಯಾರ್ಥಿಗಳು ಪೋಷಕರ ಹತ್ತಿರ ಸುಳ್ಳು ಹೇಳಿ ಹಣ ಕೇಳುವುದು, ಅಥವಾ ಕದಿಯುವುದು, ಸ್ನೇಹಿತರಿಂದ ಸಾಲ ಮಾಡುವುದು, ಇವು ಅಪ್ರಾಪ್ತ ವಯಸ್ಸಿನಲ್ಲಿಯೆ ಹೆಚ್ಚು ಕಂಡು ಬರುತ್ತವೆ. ಈಗಾಗಲೇ ಇಂತಹ ಘಟನೆಗಳು ನಡೆದಿದ್ದು ಬೆಳಕಿಗೆ ಬಂದಿವೆ.

ಪ್ರೇಮಿಗಳ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪೋಷಕರಿಗೆ ಹಾಗೂ ಶಿಕ್ಷಕರಿಗೆ ತಿಳಿಯದಂತೆ ಶಾಲೆಗೆ ಚಕ್ಕರ್ ಹಾಕಿ ಸಿನಿಮಾ ಥೇಟರ್ ಹಾಗೂ ಇನ್ನು ಇತರೆ ಸ್ಥಳಗಳಿಗೆ ಹೋಗುವ ಸಾಧ್ಯತೆಯೂ ಇರುತ್ತದೆ. ಜೊತೆಗೆ ಪ್ರೇಮಿಗಳ ದಿನದ ಆಚರಣೆಯ ಸಾಂಕೇತಿಕವಾಗಿ ಕೆಂಪು ಬಣ್ಣದ ಉಡುಪನ್ನು ತೊಡುವುದು ಅಥವಾ ಮನೆಯಿಂದ ಹೊರಗೆ ಬಂದು ಉಡುಪನ್ನು ಬದಲಾಯಿಸಿ ಹೊರಗೆ ಹೋಗುವ ಸನ್ನಿವೇಶಗಳು ಇರುವುದರಿಂದ ಪೋಷರು ಮಕ್ಕಳ ಮೇಲೆ ನಿಗಾ ವಹಿಸಬೇಕು ಎನ್ನಲಾಗಿದೆ.

ಇನ್ನು ಶಿಕ್ಷಕರು, ಪಿ.ಟಿ.ಎ. (ಪೇರೆಂಟ್ ಟೀಚರ್ಸ್ ಅಸೋಸಿಯೇಷನ್) ಸದಸ್ಯರುಗಳು ಸೇರಿದಂತೆ ಮಕ್ಕಳ ಬ್ಯಾಗ್ ಚೆಕ್ ಮಾಡುವುದು ಹಾಗೆಯೇ ಪೋಷಕರು ಕೂಡ ಮಕ್ಕಳ ಮೇಲೆ ಕಾಳಜಿ ವಹಿಸಬೇಕು ಎಂದು ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.