ರಾಯಚೂರು(ಜೂನ್.29) ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಕಳೆದ ಬುಧವಾರ ನಡೆಸಿದ್ದ ಗ್ರಾಮ ವಾಸ್ತವ್ಯ ಮತ್ತು ಜನತಾದರ್ಶನದ ವೇಳೆ ಪ್ರತಿಭಟನೆಗಳು ನಡೆದಿದ್ದು ಇದಕ್ಕೆ ಭದ್ರತಾ ಲೋಪವೇ ಕಾರಣ ಎಂದು ಇಬ್ಬರು ಪೋಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶಿಸಲಾಗಿದೆ.

ಸಿಎಂ ಕುಮಾರಸ್ವಾಮಿ ಬುಧವಾರದಂದು ರಾಯಚೂರಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ವೇಳೆ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿ ಸಿಎಂ ತೆರಳುತ್ತಿದ್ದ ಬಸ್ ಗೆ ಮುತ್ತಿಗೆ ಹಾಕಿದ್ದರಿಂದ ಸಿಎಂ ವಾಸ್ತವ್ಯದ ಭದ್ರತೆಯ ಜವಾಬ್ದಾರಿಯನ್ನು ವಹಿಸಿದ್ದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ನಿಂಗಪ್ಪ ಹಾಗೂ ಯರಗೇರಾ ಇನ್ಸ್​ಪೆಕ್ಟರ್​ ದತ್ತಾತ್ರೇಯ ಅವರನ್ನು ಸರಿಯಾದ ಭದ್ರತೆಯನ್ನು ನೀಡಿಲ್ಲವೆಂದು ಅವರ ಅಮಾನತಿಗೆ ಆದೇಶ ನೀಡಿದೆ.

ಪ್ರತಿಭಟನಾಕಾರರ ಪ್ರತಿಭಟನೆಗಳಿಂದ ಬೇಸತ್ತ ಮುಖ್ಯಮಂತ್ರಿ ಲಾಠಿಚಾರ್ಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಇದು ರಾಜ್ಯದಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿ ಸಿಎಂ ಕುಮಾರಸ್ವಾಮಿ ಇರುಸು ಮುರುಸು ಅನುಭವಿಸಬೇಕಾಯಿತು. ಇದರ ಪರಿಣಾಮ ಈಗ ಸಿಎಂ ಕಾರ್ಯಕ್ರಮಕ್ಕೆ ಸರಿಯಾದ ಭದ್ರತೆ ಒದಗಿಸದ ಹಿನ್ನೆಲೆ ಇಬ್ಬರು ಪೋಲೀಸರನ್ನು ಅಮಾನತು ಮಾಡಲು ನಿರ್ಧರಿಸಲಾಗಿದೆ. ಇನ್ನು ಈ ಅಮಾನತು ಆದೇಶ ಜಾರಿಗೆ ಬರಲು ಬಳ್ಳಾರಿ ವಲಯದ ಐಜಿಯವರಿಂದ ಅನುಮತಿ ಬೇಕಾಗಿದೆ.