ಮುಂಬೈ(ಸೆ:04): ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧೂ ಅವರ ಬಯೋ ಪಿಕ್ ರೆಡಿಯಾಗ್ತಿದೆ ಅನ್ನೋ ಸುದ್ದಿ ಕೆಲವೇ ದಿನಗಳ ಹಿಂದೆ ಹರಿದಾಡಿತ್ತು. ಪಿ ವಿ ಸಿಂಧೂ ಅವರ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಪಾತ್ರವನ್ನು ಬಾಲಿವುಡ್‍ನ ಕಿಲಾಡಿ ಅಕ್ಷಯ್ ಕುಮಾರ್ ನಿರ್ವಹಿಸಲಿದ್ದಾರೆ ಅಂತಲೂ ಮಾಹಿತಿ ಕೇಳಿ ಬಂದಿತ್ತು. ಇದಕ್ಕೆ ಪೂರಕ ಎಂಬಂತೆ ಅಕ್ಷಯ್ ಕುಮಾರ್ ಪಿ ವಿ ಸಿಂಧೂ ಅವರು ಚಿನ್ನದ ಪದಕದೊಂದಿಗೆ ತವರಿಗೆ ಮರಳಿದಾಗ ತಮ್ಮ ಟ್ವಿಟರ್ ಖಾತೆಯಲ್ಲಿ ವಿಶ್ ಕೂಡಾ ಮಾಡಿದ್ದರು.

ಆದರೆ ಈ ಕುರಿತು ಪ್ರತಿಕ್ರಯಿಸಿದ್ದ ಪುಲ್ಲೇಲ ಗೋಪಿ ಚಂದ್, ತಮ್ಮ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸಿದರೆ ತಮಗೆ ಸಂತಸವೇ ತಾವೂ ಕೂಡಾ ಅಕ್ಷಯ್ ಅಭಿಮಾನಿ, ಆದ್ರೆ ತಮಗೆ ಚಿತ್ರ ನಿರ್ಮಾಣದ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಈಗ ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಅಸಲಿಗೆ ಪಿವಿ ಸಿಂಧೂ ಅವರ ಬಯೋ ಪಿಕ್ ಬಾಲಿವುಡ್‍ನ ತೆರೆಗೆ ಬರೋದಕ್ಕೆ ಸಿದ್ಧತೆಗಳು ನಡೆದಿವೆ. ಈ ಕುರಿತು ಸೋನು ಸೂದ್ ಅಧಿಕೃತವಾಗಿ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಈ ಸುದ್ದಿಗೆ ಹೊಸದಾಗಿ ಇನ್ನೊಂದು ಅಂಶವೂ ಸೇರ್ಪಡೆಗೊಂಡಿದೆ. ಪಿ ವಿ ಸಿಂಧೂ ಅವರ ಕೋಚ್ ಪಾತ್ರವನ್ನು ಅಕ್ಷಯ್ ಕುಮಾರ್ ನಿರ್ವಹಿಸಲಿದ್ದಾರೆ ಎಂಬುದು ಹಳೆಯ ಸುದ್ದಿಯಾದರೆ, ಸಿಂಧೂ ಪಾತ್ರವನ್ನು ಸಮಂತಾ ಅಕ್ಕಿನೇನಿ ನಿರ್ವಹಿಸಲಿದ್ದಾರೆ ಎಂಬುದು ಹೊಸ ಸುದ್ದಿ.

ಸಿಂಧೂ ಪಾತ್ರಕ್ಕೆ ಸಮಂತಾ ಸೂಕ್ತವಾಗಿ ಒಪ್ಪುತ್ತಾರೆ ಈ ಕಾರಣಕ್ಕಾಗಿ ಸಮಂತಾ ಈ ಪಾತ್ರವನ್ನು ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು ಚಿತ್ರ ತಂಡವಾಗಲೀ, ಅಥವಾ ಸೋನು ಸೂದ್ ಆಗಲಿ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧೂ ಅವರ ಬಯೋ ಪಿಕ್ ತೆರೆಗೆ ಬರುವ ಮಾಹಿತಿ ಮಾತ್ರ ಪಕ್ಕಾ ಆಗಿದೆ. ಅಲ್ಲದೆ ಸಿಂಧೂ ಪಾತ್ರವನ್ನು ಸಮಂತಾ ನಿರ್ವಹಿಸಿದರೆ ತುಂಬಾ ಸೂಕ್ತ ಎಂದು ಸಮಂತಾ ಅಭಿಮಾನಿಗಳು ಕಾತರರಾಗಿದ್ದಾರೆ.