ಮೈಸೂರು(ಜು:22): ಸಾ ರಾ ಮಹೇಶ್ “ನನ್ನ ತಂದೆ ವಿಶ್ವನಾಥ್ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಸಾಬೀತುಪಡಿಸಿ ನಂತರ ಮಾತನಾಡಲಿ” ಎಂದು ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಾ ರಾ ಮಹೇಶ್ ಗೆ ಆನೆ ತೂಕವೂ ಇಲ್ಲ. ನಾಯಿ ನಿಯತ್ತೂ ಇಲ್ಲ. ಗುಳ್ಳೆ ನರಿ, ಸಮಯ ಸಾಧಕ” ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

“ನಮ್ಮ ತಂದೆಯವರನ್ನು ಜಾತ್ಯತೀತ ಜನತಾ ದಳಕ್ಕೆ ಕರೆತಂದದ್ದು ಸಾ ರಾ ಮಹೇಶ್ ಅಲ್ಲ, ಮಧು ಬಂಗಾರಪ್ಪ ಅವರು. ನಾವು ಜಾತ್ಯಾತೀತ ಜನತಾದಳಕ್ಕೆ ಬಂದ ಮೇಲೆ ಸಾ ರಾ ಮಹೇಶ್ ಗೆದ್ದಿದ್ದು. ಇಲ್ಲ ಅಂದ್ರೆ 5 ಸಾವಿರ ಮತಗಳಲ್ಲಿ ಸೋಲುತ್ತಿದ್ದರು. ಅಧಿಕಾರ ಹಾಗೂ ಹಾಗೂ ದುಡ್ಡಿನ ದಾಹದಿಂದ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಸಾ ರಾ ಮಹೇಶ್ ಅವರಿಗೂ ಇಬ್ಬರು ಮಕ್ಕಳಿದ್ದಾರೆ. ಅವರು ಯೋಚಿಸಿ ಮಾತನಾಡಬೇಕು ಎಂದಿದ್ದಾರೆ.

ನಮ್ಮ ತಂದೆ ವಿಶ್ವನಾಥ್ ಅವರು ಬಿಜೆಪಿ ಸೇರ್ಪಡೆಗೆ ಕೋಟಿ ಕೋಟಿ ಹಣ ಪಡೆದಿರುವ ಬಗ್ಗೆ ಆಣೆ ಪ್ರಮಾಣ ಮಾಡಲಿ ಎಂದು ಹೇಳುತ್ತಿದ್ದಾರೆ. ಸಾ ರಾ ಮಹೇಶ್ ಅವರೇ ನನ್ನ ಮಗನ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ಬಿಜೆಪಿಯಿಂದ ನಾವೊಂದು ರುಪಾಯಿಯನ್ನೂ ಮುಟ್ಟಿಲ್ಲ. ದಯವಿಟ್ಟು ಸಾರ್ವಜನಿಕರ ಮುಂದೆ ಬಂದು ಬಿಜೆಪಿಯಿಂದ ಹಣ ಪಡೆದಿರುವ ಬಗ್ಗೆ ಸಾಬೀತು ಮಾಡಿ” ಎಂದು ಅಮಿತ್ ಸವಾಲೆಸೆದಿದ್ದಾರೆ.