ಮೈಸೂರು(ಜೂನ್.13) ಬೆಂಗಳೂರಿನ ಐಎಂಎ ಜ್ಯುವೆಲರಿ ಮಾಲೀಕನ ವಂಚನೆ ಪ್ರಕರಣ ಬೆನ್ನಲ್ಲಿಯೇ ಈಗ ಮೈಸೂರಿನಲ್ಲೂ ಅದೇ ರೀತಿಯ ವಂಚನೆಯ ಪ್ರಕರಣ ನಡೆದಿದೆ.

ಮೈಸೂರಿನ `ನಿಷ್ಕಾ ಗ್ರೂಪ್ ಆಫ್ ಕಂಪನಿ’ ಎಂಬ ಹೆಸರಿನಲ್ಲಿ ಜನರಿಗೆ ದೋಖಾ ಮಾಡಿದ್ದಾರೆ. ಒಮದಲ್ಲ, ಎರಡಲ್ಲ ಬರೊಬ್ಬರಿ ರೂ.200 ಕೋಟಿ ವಂಚನೆ ಮಾಡಲಾಗಿದೆ.

ಬರೋಬ್ಬರಿ 4 ಲಕ್ಷ ಮಂದಿಗೆ ನಿಷ್ಕಾ ಕಂಪನಿಯು ಪಂಗನಾಮ ಹಾಕಿದೆ. ನಿಷ್ಕಾ ಗ್ರೂಪ್ ಆಫ್ ಕಂಪನಿ ಹೆಸರಿನಲ್ಲಿ ಬಡ ಜನರಿಗೆ ವಂಚನೆ ಮಾಡಲಾಗಿದೆ. ಚಪ್ಪಲಿ ಹೊಲಿಯುವವರು, ಪೌರಕಾರ್ಮಿಕರು, ಬಾಳೆಹಣ್ಣು ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಬಡ, ಮಧ್ಯಮ ವರ್ಗದವರು ಮೋಸ ಹೋಗಿದ್ದಾರೆ.

ಪಣಿರಾಜ್ ಗೌಡ ಕುಟುಂಬದಿಂದ ಲಕ್ಷಾಂತರ ಮಂದಿಗೆ ಟೋಪಿ ಹಾಕಲಾಗಿದೆ. ಟಿ.ಸರಸೀಪುರ ತಾಲ್ಲೂಕು ಗರ್ಗೇಶ್ವರಿ ಗ್ರಾಮದ ಪಣಿರಾಜ್ ಗೌಡ ಎನ್ನುವವರಿಂದ 13 ಸಾವಿರ ಏಜೆಂಟರನ್ನಿಟ್ಟುಕೊಂಡು ಕೋಟಿ ಕೋಟಿ ಲೂಟಿ ಮಾಡಲಾಗಿದೆ. 2008ರಿಂದ 12ಕ್ಕೂ ಅಧಿಕ ಕಂಪನಿ ಸ್ಥಾಪನೆ ಮಾಡಿ ಮೋಸ ಮಾಡಲಾಗಿದೆ. ಅಧಿಕ ಬಡ್ಡಿ, ಸೈಟ್ ಆಸೆ ತೋರಿಸಿ ಜನರನ್ನು ವಂಚಿಸಿದ್ದಾರೆ.