ಬೆಂಗಳೂರು(ಜೂನ್.12) ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಹತ್ತಿ ಬಟ್ಟೆ ಎಂದು ರಟ್ಟಿನ ಬಾಕ್ಸ್ ಗಳ ಮೇಲೆ ಬರೆದು ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ.1.5 ಕೋಟಿ ಮೌಲ್ಯದ ವಿವಿಧ ಬ್ರ್ಯಾಂಡ್ ಗಳ ವಿದೇಶಿ ಸಿಗರೇಟ್ ಗಳನ್ನು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿದೇಶದಲ್ಲಿ ತಯಾರಿಸಲಾದ ಸಿಗರೇಟುಗಳನ್ನು ರಟ್ಟಿನ ಬಾಕ್ಸ್ ಗಳಲ್ಲಿ ತುಂಬಿಸಿ `ಯಶವಂತಪುರ ದುರಂತೊ ಎಕ್ಸ್‍ಪ್ರೆಸ್’ ರೈಲಿನಲ್ಲಿ ಹೌರಾದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಗುಪ್ತಚರ ಇಲಾಖೆ ನೀಡಿದ ಸುಳಿವಿನ ಮೂಲಕ ಕಸ್ಟಮ್ಸ್ ಅಧಿಕಾರಿಗಳು ಎಲ್ಲಾ ಸಿಗರೇಟು ಬಾಕ್ಸ್ ಗಳನ್ನು ಜಪ್ತಿ ಮಾಡಿದ್ದಾರೆ.

ಇದೇ ತಿಂಗಳು 8ರಂದು ಕಸ್ಟಮ್ಸ್ ಅಧಿಕಾರಿಗಳು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಳಿಸಲಾಗಿದ್ದ ಪಾರ್ಸಲ್ ಗಳನ್ನು ಪರಿಶೀಲಿಸಿದಾಗ ರಟ್ಟಿನ ಬಾಕ್ಸ್‍ಗಳಲ್ಲಿ 5.86 ಲಕ್ಷ ಸಿಗರೇಟ್ ಗಳು ಪತ್ತೆಯಾಗಿದ್ದವು.

ಆರೋಗ್ಯ ಇಲಾಖೆಯು ಕಡ್ಡಾಯಗೊಳಿಸಿರುವ ಚಿತ್ರ ಸಹಿತ ಎಚ್ಚರಿಕೆ ಸಂದೇಶ ಪ್ಯಾಕ್ ಗಳ ಇಲ್ಲದಿರುವುದರಿಂದ ಸಿಗರೇಟು ಮಾರಾಟ ನಿಷೇಧಿಸಲಾಗಿದೆ. ಅದಲ್ಲದೆ ಇವುಗಳನ್ನು ವಿದೇಶದಿಂದ ಅಕ್ರಮವಾಗಿ ಸಾಗಣೆ ಮಾಡಿಕೊಂಡಿರುವ ಶಂಕೆಯಿದೆ ಎಂದು ನಗರದ ಕಸ್ಟಮ್ಸ್ ಕಮಿಷನರ್ ಕಚೇರಿಯ ಹೆಚ್ಚುವರಿ ಕಮಿಷನರ್ ರಮಣರೆಡ್ಡಿ ತಿಳಿಸಿದ್ದಾರೆ.