ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪಾತಕಿಗಳ ಅಟ್ಟಹಾಸ ಜೋರಾಗಿದ್ದು, ದುಷ್ಕರ್ಮಿಗಳು ರೌಡಿಶೀಟರ್ ಮೇಲೆ ಫೈರಿಂಗ್ ಮಾಡಿರುವ ಘಟನೆ ನಗರದ ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರೌಡಿಶೀಟರ್ ಚಟ್ನಿ ಸಲೀಂ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾರೆ. ರೌಡಿ ಸಲೀಂನನ್ನ 50 ಮೀಟರ್‍ನಷ್ಟು ದೂರು ಅಟ್ಟಾಡಿಸಿಕೊಂಡು ಹೋದ ದುಷ್ಕರ್ಮಿಗಳು ಸಿನಿಮಾ ಸ್ಟೈಲಿನಲ್ಲಿ ಸುಮಾರು ಎಂಟು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ರೌಡಿ ಸಲೀಂಗೆ ಹೊಟ್ಟೆ, ಎದೆ, ಕೈಗೆ ಗುಂಡು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ತಿಳಿಸಿದ್ದಾರೆ.

ರೌಡಿಶೀಟರ್ ಚಟ್ನಿ ಸಲೀಂ ಸೋಮವಾರ ರಾತ್ರಿ 11 ಗಂಟೆಯ ಹೊತ್ತಲ್ಲಿ ಗೆಳೆಯ ಜಾಫರ್ ನೊಂದಿಗೆ ಮಾತಾಡುತ್ತಿದ್ದನು. ಈ ವೇಳೆ ಏಕಾಏಕಿ ಎರಡು ಬೈಕ್‍ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಅಡ್ಡಾದಿಡ್ಡಿ ಗುಂಡು ಹಾರಿಸಿದ್ದಾರೆ.