ಬೆಂಗಳೂರು(ಜೂ:05): ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದ ದಲಿತ ಸಂಸದರಿಗೆ ಅವಕಾಶ ಸಿಕ್ಕಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬೆಳಗ್ಗೆ ಮಾಡಿದ್ದ ಟ್ವೀಟ್‌ಗೆ ಬಿಜೆಪಿ ತಿರುಗೇಟು ನೀಡಿದೆ.

ಇಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ,”ಸಂವಿಧಾನ ಕರ್ತೃ ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಬಾಯಿ ಬಡಾಯಿ ಮೂಲಕ ದಲಿತರ ಉದ್ದಾರ ಎಂದರೆ ವಾಸ್ತವವಾಗಿ ದಲಿತರ ಉದ್ದಾರವಾಗಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ರಾಜ್ಯದ ಮೀಸಲು ಕ್ಷೇತ್ರಗಳಲ್ಲಿ ಕೂಡ ಬಿಜೆಪಿ ಸಂಸದರು ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು. ಹೀಗಿದ್ದರೂ ಕೇಂದ್ರ ಸಂಪುಟದಲ್ಲಿ ರಾಜ್ಯದ ಒಬ್ಬ ದಲಿತ ಸಂಸದನಿಗೂ ಅವಕಾಶ ಸಿಕ್ಕಿಲ್ಲ. ಇದಕ್ಕಿಂತ ದೊಡ್ಡ ದ್ರೋಹ, ಅನ್ಯಾಯ ಬೇರೇನಿದೆ? ಎಂದು ಸಿದ್ದರಾಮಯ್ಯ ತಮ್ಮ ಆಕ್ರೋಶ ಹೊರಹಾಕಿದ್ದರು.

‘ದಲಿತರ ಮೇಲಿನ ಪ್ರೀತಿಯನ್ನು ಟ್ವಿಟರ್‌ನಲ್ಲಿ ತೋರಿಸಬೇಡಿ. ನಿಜವಾದ ಪ್ರೀತಿಯಿದ್ದರೆ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಿ ತೋರಿಸಿ. ಉಪ ಮುಖ್ಯಮಂತ್ರಿ ಪರಮೇಶ್ವರ್‌ಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದು ನೀವೇ. ಅವರು ದಲಿತ ಎಂಬ ಕಾರಣಕ್ಕೆ ಸಿಎಂ ಸ್ಥಾನ ತಪ್ಪಿಸಿದ್ದೀರಿ ಎಂದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಟ್ವೀಟ್‌ನಲ್ಲಿ ಬಿಜೆಪಿ ತಿರುಗೇಟು ನೀಡಿದೆ.