ಬೆಂಗಳೂರು(ಜೂನ್.20) ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿರುವಂತಹ ಹೆಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ಹೆಚ್.ಡಿ.ಕುಮಾರಸ್ವಾಮಿಯವರಿಗೆ ಕೊಡುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶಾಸಕರ ಭವನದಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್ ಅವರು, ನನ್ನ ರಾಜೀನಾಮೆಯನ್ನು ಅಂಗೀಕರಿಸಿ ಎಂದು ಮನವಿ ಮಾಡಿಕೊಂಡರು. ರಾಜ್ಯಾಧ್ಯಕ್ಷ ಸ್ಥಾನವನ್ನು ಕುಮಾರಸ್ವಾಮಿಯವರಿಗೆ ನೀಡುವುದು ಉತ್ತಮ. ಸಿಎಂ ಮತ್ತು ಅಧ್ಯಕ್ಷ ಸ್ಥಾನ ನಿಭಾಯಿಸಿದ ಉದಾಹರಣೆ ಇದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನವನ್ನು ಕುಮಾರಸ್ವಾಮಿಯವರಿಗೆ ನೀಡುವುದು ಒಳ್ಳೆಯದು ಎಂಬ ಮಾತನ್ನು ಹೇಳಿದ್ದಾರೆ.

ಜೆಡಿಎಸ್ ನಿಂದ ಒಂದು ಮಂತ್ರಿಸ್ಥಾನ ಖಾಲಿ ಇದೆ. ಜೆಡಿಎಸ್ ರಾಜ್ಯಾಧ್ಯಕ್ಷ ರಾಜೀನಾಮೆ ಅಂಗೀಕಾರ ಮಾಡಬೇಕು, ಇಲ್ಲದಿದ್ದರೆ ನಾನು ಹುಣಸೂರು ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತೇನೆ ಎಂದಿದ್ದಾರೆ.

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಅಧಿಕಾರದ ಹಂಚಿಕೆ ಮಾಡಬೇಕು. ಜೆಡಿಎಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಬೆಳೆಸಬೇಕಿದೆ. ದಯಮಾಡಿ ನನ್ನ ರಾಜೀನಾಮೆಯನ್ನು ಸ್ವೀಕರಿಸಿ. ಮಧ್ಯಂತರ ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದು ಹೇಳುತ್ತಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನ ಕುಮಾರಸ್ವಾಮಿ ವಹಿಸಿಕೊಳ್ಳಬೇಕು.

ನನ್ನ ಅನುಭವವನ್ನು ಸಿಎಂ ಕುಮಾರಸ್ವಾಮಿಯಾಗಲಿ, ಸಿದ್ದರಾಮಯ್ಯನವರಾಗಲಿಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಶಿಕ್ಷಣ ಇಲಾಖೆಯನ್ನು ತಿರಸ್ಕರಿಸಿದ ಸರ್ಕಾರವನ್ನು ಜನ ಮತ್ತೆ ಪುರಸ್ಕರಿಸುವುದಿಲ್ಲ.

ರಾಜೀನಾಮೆ ವಿಚಾರವಾಗಿ ಮನೆಗೆ ಬರುತ್ತೇನೆ ಎಂದು ದೇವೇಗೌಡರಿಗೆ
ಹೇಳಿದ್ದೆ ಆದ್ರೆ ಅವರನ್ನು ಮುಖಾಮುಖಿ ಎದುರಿಸುವ ಚೈತನ್ಯ ನನ್ನಲ್ಲಿಲ್ಲ.

ಇಬ್ಬರು ಪಕ್ಷೇತರರನ್ನು ಸಚಿವರನ್ನಾಗಿ ಮಾಡಿದ್ದಾರೆ. ಆದರೆ ಇನ್ನೂ ಖಾತೆ ಹಂಚಿಕೆ ಮಾಡಿಲ್ಲ. ಇಬ್ಬರಿಗೆ ಈ ರೀತಿ ಅವಮಾನ ಮಾಡಬಾರದು. ತಕ್ಷಣ ಖಾತೆ ಹಂಚಿಕೆ ಮಾಡಬೇಕು. ಆ ಸಚಿವರ ಸಮುದಾಯಗಳಿಗೆ ನೋವುಂಟು ಮಾಡಬಾರದು. ರೋಷನ್ ಬೇಗ್ ರನ್ನು ಎಐಸಿಸಿ ಅಮಾನತು ಮಾಡಿದೆ. ಯಾರ ಮನೆ ಬಾಗಿಲಿಗೂ ಹೋಗಿ ನಾನು ಮಂತ್ರಿಗಿರಿ ಕೇಳಲಿಲ್ಲ. ನಾನು ಮಂತ್ರಿಗಿರಿಯಾಗಿ ಹಾತೊರೆಯೋದಿಲ್ಲ. ಮುಖ್ಯಮಂತ್ರಿಗಳ ಪಕ್ಕದಲ್ಲಿ ನಿಂತು ಕೆಲಸ ಮಾಡಬೇಕು ಎನ್ನುವ ಆಸೆ ಅಷ್ಟೇ ಎಂದು ಹೆಚ್.ವಿಶ್ವನಾಥ್ ಶಾಸಕರ ಭವನದಲ್ಲಿ ಮಾತನಾಡಿದ್ದಾರೆ.