ಚೆನ್ನೈ: ಇತ್ತೀಚೆಗೆ ಜೊಮ್ಯಾಟೋ ಡೆಲಿವರಿ ಬಾಯ್ ಆರ್ಡರ್ ಮಾಡಿದ ಆಹಾರವನ್ನು ದಾರಿ ಮಧ್ಯೆಯೇ ಅರ್ಥ ತಿಂದ ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಈಗ ಸ್ವಿಗ್ಗಿ ಮೂಲಕ ತರಿಸಿದ ಆಹಾರದಲ್ಲಿ ರಕ್ತದ ಬ್ಯಾಂಡ್ ಏಡ್ ಸಿಕ್ಕಿದೆ.

ಚೆನ್ನೈನಲ್ಲಿ ವ್ಯಕ್ತಿಯೊಬ್ಬ ಆನ್‍ಲೈನ್ ಮೂಲಕ ತರಿಸಿದ ಆಹಾರದಲ್ಲಿ ರಕ್ತದ ಕಲೆ ಇರುವ ಬ್ಯಾಂಡ್ ಏಡ್ ಪತ್ತೆಯಾಗಿದೆ.

ಬಾಲಮುರುಗನ್ ದೀನ ದಯಾಳ್ ಎಂಬುವವರು ಸ್ವಿಗ್ಗಿ ಫುಡ್ ಆ್ಯಪ್ ನ ಮೂಲಕ ಆನ್‍ಲೈನ್‍ನಲ್ಲಿ ಚಿಕನ್ ಶೆಜ್ವಾನ್ ಚಾಪ್ಯೂಯಿ ಆರ್ಡರ್ ಮಾಡಿದ್ದರು. ಆದರೆ ಅದನ್ನು ಅರ್ಧ ತಿಂದ ಬಳಿಕ ರಕ್ತದ ಕಲೆ ಇರುವ ರಕ್ತದ ಬ್ಯಾಂಡ್ ಏಡ್ ಪತ್ತೆಯಾಗಿದೆ.

ಇದನ್ನು ಬಾಲಮುರುಗನ್ ಎಂಬುವರು ಫೆ.10ರಂದು ಫೋಟೋ ಸಮೇತ ಫೇಸ್‍ಬುಕ್‍ನಲ್ಲಿ ಸ್ವಿಗ್ಗಿಯನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಈ ಫೋಸ್ಟ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಸ್ವಿಗ್ಗಿ ಕಂಪನಿಯ ವಿರುದ್ಧ ಗರಂ ಆಗಿದ್ದಾರೆ.

ಈ ಕುರಿತು ಪ್ರತಿಕ್ರಿಯೇ ನೀಡಿರುವ ಸ್ವಿಗ್ಗಿ ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದು, ಇನ್ನು ಮುಂದೆ ಈ ತರದ ತಪ್ಪು ನಡೆಯದಂತೆ ಎಚ್ಚರದಿಂದ ಇರುವ ಭರವಸೆ ನೀಡಿದೆ. ಅಲ್ಲದೇ ಇಂಥ ಆಹಾರ ಪೂರೈಸಿದ ರೆಸ್ಟೋರೆಂಟ್ ಅನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎನ್ನಲಾಗಿದೆ.

ಒಟ್ಟಾರೆ ಸ್ವಿಗ್ಗಿ ಕಂಪನಿಯ ಬೇಜವಾಬ್ದಾರಿಯುತ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಆನ್‍ಲೈನ್ ಮೂಲಕ ಫುಡ್ ತರಿಸಿವರಿಗೆ ಈ ಘಟನೆ ಶಾಕ್ ನೀಡಿದೆ.