ಬೆಂಗಳೂರು [ಜು.12] : ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು 50 ಕೋಟಿ ರೂ. ಲಂಚ ಪಡೆದು ವಿವಿಧ ಇಲಾಖೆಯಲ್ಲಿ ಇಂಜಿನಿಯರ್‌ಗಳಿಗೆ ಬಡ್ತಿ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಎಸ್‌.ಲಿಂಗಮೂರ್ತಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವುದನ್ನು ಇಡೀ ದೇಶವೇ ನೋಡುತ್ತಿದೆ. ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವ ಮಧ್ಯೆ ರೇವಣ್ಣ ಅವರು, ಲೋಕೋಪಯೋಗಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್‌ ಇಲಾಖೆಯಲ್ಲಿನ ತಮ್ಮ ಸಮುದಾಯಕ್ಕೆ ಸೇರಿದ ಸುಮಾರು 800 ಮಂದಿ ಇಂಜಿನಿಯರ್‌ಗಳಿಗೆ ಬಡ್ತಿ ನೀಡಿದ್ದಾರೆ. ಈ ಎಂಜಿನಿಯರ್‌ಗಳಿಂದ ಒಂದೇ ದಿನದಲ್ಲಿ 50 ಕೋಟಿ ರು. ಲಂಚ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಕ್ಕೆ ಸೇರಿದ ಸುಮಾರು 300 ಮಂದಿ ಇಂಜಿನಿಯರ್‌ಗಳು ಕಳೆದ 13 ತಿಂಗಳಿಂದ ಬಡ್ತಿಗಾಗಿ ಕಾಯುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳಂತೆ ವರ್ತತಿಸುತ್ತಿರುವ ಸಚಿವ ಎಚ್‌.ಡಿ.ರೇವಣ್ಣ ಅವರು ಎಲ್ಲಾ ಇಲಾಖೆಯಲ್ಲಿ ಬಡ್ತಿಯಲ್ಲಿ ಮಧ್ಯ ಪ್ರವೇಶಿ ತಮ್ಮ ಸಮುದಾಯದ ಅಧಿಕಾರಿಗಳಿಗೆ ಬಡ್ತಿ ಕೊಟ್ಟಿದ್ದಾರೆ. ಜು.1 ರಿಂದ ಜು.10ರವರೆಗೆ ನಡೆದ ಬಡ್ತಿ ಮತ್ತು ವರ್ಗಾವಣೆಯಲ್ಲಿ ರೇವಣ್ಣ ಸುಮಾರು 500 ಕೋಟಿ ರು. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.