ಮಂಗಳೂರು(ಜುಲೈ.24) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲದಿನಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ನಡೆದಿದ್ದು, ಈಗ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ತಾಲೂಕಿನ ವಿದ್ಯಾರ್ಥಿನಿ ಜೂನ್ 17ರಂದು ಮನೆಯಿಂದ ನಾಪತ್ತೆಯಾಗಿದ್ದು. ಆಕೆಯ ಮನೆಯವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು, 16 ವರ್ಷದ ಈ ವಿದ್ಯಾರ್ಥಿನಿಯನ್ನು ಹಾಸನದಲ್ಲಿ ವಶಕ್ಕೆ ಪಡೆದಿದ್ದರು. ಈಕೆ ಚಂದ್ರಾಕ್ಷ ಎನ್ನುವ ಹುಡುಗನೊಂದಿಗೆ ತೆರಳಿದ್ದು, ಆತ ಈಕೆಯನ್ನು ಅತ್ಯಾಚಾರ ನಡೆಸಿ, ಬೆಂಗಳೂರಿನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿರಿಸಲು ಸಿದ್ಧತೆ ನಡೆಸಿದ್ದ ಎಂದು ಹೇಳಲಾಗಿದೆ.

ಬಾಲಕಿಯ ಮೊಬೈಲ್ ಫೋನ್ ನ ಕಾಲ್ ಡಿಟೇಲ್ಸ್ ಅನ್ನು ಪರಿಶೀಲಿಸಲಾಗಿದೆ. ಇನ್ನಷ್ಟು ವಿಚಾರಣೆಗೆ ಒಳಪಡಿಸಿದಾಗ, ಒಟ್ಟು ಆರು ಮಂದಿ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಕಡೆ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರವೆಸಗಿದವರನ್ನು ಚಂದ್ರಾಕ್ಷ (25), ಸಂದೀಪ್ ಕುಮಾರ್ (23), ಹರ್ಷೇಂದ್ರ (24), ಲವಕುಮಾರ್ (27) ಲಕ್ಷ್ಮೀಶ ಯಾನೆ ಚರಣ್ (24) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಚಂದ್ರಾಕ್ಷ ವಿರುದ್ಧ ಬಾಲಕಿಯ ಅಪಹರಣ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದರೆ, ಉಳಿದ ಆರೋಪಿಗಳ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಐವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.