ಬೆಂಗಳೂರು(ಫೆ.13): ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ಥೆಯಂತಾಗಿದೆ ಎಂದ ಸ್ಪೀಕರ್ ರಮೇಶ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆಗೆ ನಟಿ ತಾರಾ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕಿ ತಾರಾ, ನೀವು ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ಥೆಯಂತಾಗಿದೆ ಎಂದು ಹೇಳಿಕೆ ನೀಡಿರುವುದು ನಮಗೆ ತುಂಬಾ ಬೇಸರ ಮೂಡಿಸಿದೆ. ನಿಮ್ಮಿಂದ ಇಂತಹ ಮಹಿಳಾ ವಿರೋಧಿ ಹೇಳಿಕೆ ನಿರೀಕ್ಷಿಸಿರಲಿಲ್ಲ. ಇದನ್ನು ನಾವು ಖಂಡಿಸುತ್ತೇವೆ. ಅವರ ತಾಯಿಯನ್ನು ನೆನೆದು ಸದನದಲ್ಲಿ ಕಣ್ಣೀರಿಟ್ಟ ರಮೇಶಣ್ಣ ಇಂದಿಗೂ ಮಹಿಳೆಯರನ್ನು ಗೌರವಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನಿಮ್ಮ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು ಎಂದು ಹೇಳಿದ್ದಾರೆ.

ಸ್ಪೀಕರ್ 50 ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪದ ಸುತ್ತ ನಿನ್ನೆ ಸದನದಲ್ಲಿ ಚರ್ಚೆ ನಡೆಯಿತು. ಈ ವೇಳೆ ತನ್ನ ಮೇಲಿನ ಆರೋಪಕ್ಕೆ ಕಣ್ಣೀರಿಟ್ಟ ರಮೇಶ್ ಕುಮಾರ್ ಅವರು, ತನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ಥೆಯಂತಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಅತ್ಯಾಚಾರದ ಬಳಿಕ ಸಂತ್ರಸ್ಥೆ ಒಮ್ಮೆ ದೂರು ನೀಡಿ ಕೋರ್ಟ್ ಮೊರೆ ಹೋಗುತ್ತಾಳೆ. ಅಲ್ಲಿ ಪ್ರಕರಣ ವಿಚಾರಣೆ ವೇಳೆ ಆರೋಪಿ ಪರ ವಕೀಲರು ಇನ್ನಷ್ಟು ಬಾರಿ ಅತ್ಯಾಚಾರದ ಘಟನೆಯನ್ನು ಸಂತ್ರಸ್ತೆಗೆ ನೆನಪಿಸಿ ಕಿರಿಕಿರಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಹೇಗೆ ಅತ್ಯಾಚಾರವಾಯಿತು? ಎಲ್ಲಿ ಅತ್ಯಾಚಾರ ನಡೆಯಿತು? ಯಾವ ಸಮಯಕ್ಕೆ ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಇದೇ ಸ್ಥಿತಿ ನನ್ನದು ಎಂದು ಹೇಳಿದ್ದರು.