ನವದೆಹಲಿ(ಜ.18): ಸ್ವಯಂಘೋಷಿತ ದೇವಮಾನವ ಹಾಗೂ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಬಾಬಾ ರಾಮ್ ರಹೀಮ್ ಸೇರಿ ನಾಲ್ವರಿಗೆ ಹರಿಯಾಣದ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ, ಮಹತ್ವದ ಆದೇಶ ಹೊರಡಿಸಿದೆ.

ಪತ್ರಕರ್ತ ರಾಮಚಂದರ್ ಛತ್ರಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇವಮಾನವ ಬಾಬಾ ರಹೀಮ್ ಕೈವಾಡ ಇರುವುದು ಖಾತ್ರಿಯಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ಬಾಬಾ ರಾಮ್ ರಹೀಮ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದರ ಕುರಿತು 2002ರಲ್ಲಿ ಪತ್ರಕರ್ತ ಛತ್ರಪತಿ ತನ್ನ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಆನಂತರ ಅವರ ಕೊಲೆಯಾಗಿತ್ತು. ಈ ಕೊಲೆಯಲ್ಲಿ ರಾಮ್ ರಹೀಂ ಸೇರಿ ಇತರೆ ಮೂವರ ಕೈವಾಡ ಇರುವುದು ರುಜುವಾತಗಿದೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕೋರ್ಟ್‍ನ ಸುತ್ತಮುತ್ತ ಪೊಲೀಸರು ಬ್ಯಾರಿಕೇಡ್‍ಗಳನ್ನು ಹಾಕಿ ಖಾಸಗಿ ವ್ಯಕ್ತಿಗಳು, ಭಕ್ತರು ಅಲ್ಲಿ ಬರದಂತೆ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ.ಹರಿಯಾಣದ ಪಂಚಕುಲ ಮತ್ತು ಸಿರ್ಸಾ ಭಾಗದ ಡೇರಾ ಸಚ್ ಸೌಧದ ಮುಖ್ಯಸ್ಥಳಗಳಲ್ಲಿ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಹೆಚ್ಚಿನ ಬಿಗಿಭದ್ರತೆ ಒದಗಿಸಲಾಗಿದೆ