ನವದೆಹಲಿ(ನ.09): ಇಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್, ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ, ಡಿ.ವೈ. ಚಂದ್ರಚೂಡ್, ಕರ್ನಾಟಕ ಮೂಲದ ಅಬ್ದುಲ್ ನಜೀರ್ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಅಯೋಧ್ಯೆ ಸಂಬಂಧ ತೀರ್ಪನ್ನು ಪ್ರಕಟಿಸಿದೆ.

ತೀರ್ಪಿನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೋರ್ಟ್ನಿಂದ ಅನುಮತಿ ಸಿಕ್ಕಿದ್ದು, ಮಂದಿರವನ್ನು ಕಟ್ಟುವ ಕೆಲಸವನ್ನು ಸರ್ಕಾರಕ್ಕೆ ನೀಡಿದೆ. ಈ ಸಂಬಂಧ ಆಗಸ್ಟ್ 6 ರಿಂದ ಸುಪ್ರೀಂ ಕೋರ್ಟ್ ಪ್ರತಿದಿನ ವಿಚಾರಣೆಯನ್ನು ನಡೆಸುತ್ತಿತ್ತು. 40 ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದ ಪೀಠ 16 ಅಕ್ಟೋಬರ್‌ವರೆಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಇಂದಿಗೆ ಕಾಯ್ದಿರಿಸಲಾಗಿತ್ತು.

ಅಯೋಧ್ಯೆ ವಿವಾದವನ್ನು ಪರಿಹರಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಫ್‌ಎಂಐ ಕಲಿಫುಲ್ಲಾ, ಧರ್ಮಗುರು ಹಾಗೂ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಮಖರ್ ಗುರೂಜಿ ಮತ್ತು ಹಿರಿಯ ವಕೀಲ ಶ್ರೀರಾಮ್‌ಮಂಚು ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚನೆ ಮಾಡಿತ್ತು. ಈ ವಿವಾದವನ್ನು ಸಮಿತಿ ಬಗೆಹರಿಸಲು ವಿಪಲವಾದ ಕಾರಣದಿಂದ ಸಂವಿಧಾನ ಪೀಠ ದಿನನಿತ್ಯ ವಿಚಾರಣೆ ಆರಂಬಿಸಿತ್ತು.

2010ರಲ್ಲಿ ಅಲಹಾಬಾದ್ ಕೋರ್ಟ್ ತನ್ನ ತೀರ್ಪಿನಲ್ಲಿ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಜಾಗ ಸಮಾನ ಮಾಡಿ, ವಿವಾದಿತ 2.77 ಎಕರೆ ಭೂಮಿಯನ್ನು 3 ಭಾಗಗಳಾಗಿ ಸುನ್ನಿ ವಕ್ ಮಂಡಳಿ, ನಿರ್ಮೋಹಿ ಅಖಾಡ ಹಾಗೂ ರಾಮ್‌ಲಲ್ಲಾಗೆ ಸಮಾನವಾಗಿ ಹಂಚಿಕೆ ಮಾಡಿ ತೀರ್ಪನ್ನು ನೀಡಿತ್ತು.