ಮಂಗಳೂರು(ಜೂನ್.11) ಅರಬ್ಬಿ ಸಮುದ್ರದ ಲಕ್ಷದ್ವೀಪದ ಸಮೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕರಾವಳಿಯ ಉದ್ದಕ್ಕೂ ಜೋರಾಗಿ ಗಾಳಿ ಬೀಸುತ್ತಿದ್ದು ಜಿಟಿಜಿಟಿ ಮಳೆಯು ಸುರಿಯುತ್ತಿದೆ.

ಮುಂಗಾರು ಮಾರುತದ ಪ್ರವೇಶದ ನಿರೀಕ್ಷೆಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಇಡೀ ದಿನ ಮೋಡ ಕವಿದ ವಾತಾವರಣವಿದ್ದು. ಆಗಾಗ ಮಳೆಯಾಗುತ್ತಿದೆ. ಮಡಿಕೇರಿ, ಭಾಗಮಂಡಲ, ತಲಕಾವೇರಿ, ಕಕ್ಕಬ್ಬೆ, ಹೊದ್ದೂರು, ವಿರಾಜಪೇಟೆ, ಬಲಮುರಿ, ಕುಶಾಲನಗರ ಸಿದ್ದಾಪುರದಲ್ಲಿ ಮಧ್ಯಾಹ್ನದ ನಂತರ ಮಳೆ ಸುರಿಯಲು ಪ್ರಾರಂಭಿಸಿದೆ.

ಇನ್ನೆರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ಮಳೆಯು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ ಮಂಗಳವಾರದವರೆಗೂ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಮಂಗಳೂರಿನ ಪಣಂಬೂರು, ತಣ್ಣೀರುಬಾವಿ, ಉಳ್ಳಾಲ ಸೇರಿದಂತೆ ಕರಾವಳಿ ತೀರದ ಎಲ್ಲಾಕಡೆಗೂ ಕಟ್ಟೆಚ್ಚರವಹಿಸಲಾಗಿದೆ.

ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ನಿಷೇಧಿಸಲಾಗಿದೆ. ಉಡುಪಿ ಜಿಲ್ಲೆಯ ಕಡಲ ತೀರಗಳಾದ ಮಲ್ಪೆ, ಬೈಂದೂರು, ಕಾಪು ಸೇರಿದಂತೆ ಹಲವಾರು ಬೀಚ್ ಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.