ನವದೆಹಲಿ(ಫೆ.23):”ನನ್ನನ್ನು ದೇಶದ ಕಾವಲುಗಾರನನ್ನಾಗಿ ಮಾಡಿ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ಕೊಟ್ಟಿರುವ ರಾಹುಲ್ ಗಾಂಧಿ ಉದ್ದಿಮೆದಾರರಿಗೆ ಮಾತ್ರ ಮೋದಿ ಕಾವಲುಗಾರರು ಎಂದು ಹೇಳಿದ್ದಾರೆ.

ಪಕ್ಷದ ಹಿರಿಯ ನಾಯಕರನ್ನು ಪದಚ್ಯುತಗೊಳಿಸಿರುವ ಅವರು ಕೇವಲ ಉದ್ಯಮಿ ಅದಾನಿಯನ್ನು ಮೇಲಕ್ಕೆ ತಂದಿದ್ದಾರೆ. ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ಜಸ್ವಂತ್ ಸಿಂಗ್ ಹಾಗೂ ಆಡ್ವಾಣಿಯವರನ್ನು ಮೂಲೆಗುಂಪು ಮಾಡಿದ್ದಂತೆ ಮೋದಿಯವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕೂಡ ಅದೇ ಸ್ಥಿತಿಗೆ ತಳ್ಳುತ್ತಿದ್ದರು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಗುಜರಾತ್‍ಲ್ಲಿ ಅಭಿವೃದ್ಧಿಯನ್ನು ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಗುಜರಾತ್ ಒಬ್ಬ ವ್ಯಕ್ತಿಯಿಂದ ಬದಲಾವಣೆಯನ್ನು ಕಂಡಿಲ್ಲ. ಕಾರ್ಮಿಕರು ಮತ್ತು ಕೃಷಿಕರ ಕಠಿಣ ಪರಿಶ್ರಮದಿಂದ ಗುಜರಾತ ರಾಜ್ಯವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದಿದ್ದಾರೆ.

ಗುಜರಾತ್‍ಲ್ಲಿ ಜನರು ಅವರಿಗೆ ಅಧಿಕಾರ ಕೊಟ್ಟರು. ಆದರೆ ಅವರು ಅದಾನಿಯನ್ನು ಮೇಲಕ್ಕೆ ತಂದರು” ಎಂದು ರಾಹುಲ್ ಗುಡುಗಿದ್ದಾರೆ. ನಮ್ಮ ಪೂರ್ವಜರು ಪಾಕಿಸ್ತಾನದಿಂದ ಇಲ್ಲಿಗೆ ವಲಸೆ ಬಂದರು ಮತ್ತು ತಮಗೆ ನೀಡಲ್ಪಟ್ಟ ಭೂಮಿಯನ್ನು ಫಲವತ್ತಾಗಿಸಲು ಕಠಿಣ ಪರಿಶ್ರಮ ಮತ್ತು ಪ್ರಯತ್ನವನ್ನು ಪಟ್ಟಿದ್ದಾರೆ ಎಂದು ಗುಜರಾತಿನ ಸಿಖ್ ಕೃಷಿಕರು ನನ್ನಲ್ಲಿ ಹೇಳಿಕೊಂಡಿದ್ದಾರೆ”.