ಬೆಂಗಳೂರು(ಸೆ:03): ಶಾಸಕ ಡಿಕೆ ಶಿವಕುಮಾರ್ ಅವರಿಗೆ ಇಡಿ ಸಂಕಷ್ಟ ಶುರುವಾಗಿರೋದು ಎಲ್ಲರಿಗೂ ಗೊತ್ತು. ಈ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಗಳನ್ನು ಮಾಡಿದ್ದಾರೆ. ಬಿಜೆಪಿ ಇಡಿಯನ್ನು ದುರ್ಬಳಕೆ ಮಾಡಿಕೊಂಡು ಡಿಕೆಶಿ ಅವರ ವಿರುದ್ಧ ಹಗೆ ಸಾಧಿಸುತ್ತಿದೆ ಅಂತಲೂ ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಬಿಜೆಪಿಯ ಕಂದಾಯ ಸಚಿವ ಆರ್ ಅಶೋಕ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇಡಿ ಮತ್ತು ಡಿಕೆಶಿ ಅವರ ಮಧ್ಯೆ ನಡೆಯುತ್ತಿರುವುದು ಕಾನೂನಿನ ಪ್ರಕ್ರಿಯೆಯಾಗಿದ್ದು, ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಬಿಐ ಮತ್ತು ಇಡಿ ಎಲ್ಲಾ ಸರ್ಕಾಗಳ ಕಾಲದಲ್ಲೂ ರಾಜಕಾರಣಿಗಳ ಮೇಲೆ ದಾಳಿ ವಿಚಾರಣೆಗಳನ್ನ ನಡೆಸಿಕೊಂಡು ಬಂದಿದೆ. ಇದೇನೂ ಹೊಸ ಪ್ರಕ್ರಿಯೆಯಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಬಿಜೆಪಿ ಧುರೀಣರ ಮೇಲೆ ದಾಳಿಗಳು ವಿಚಾರಣೆಗಳು ನಡೆದಿವೆ. ಸಿಎಂ ಯಡಿಯೂರಪ್ಪ ಅವರನ್ನೊಳಗೊಂಡು ಪ್ರಧಾನಿ ಮೋದಿ ಅವರ ಮೇಲೂ ಕಾನೂನಿಕ ಕ್ರಿಯೆಗಳು ಜಾರಿಯಾಗಿದ್ದವು. ಆಗ ಅದನ್ನು ಯಾರಾದರೂ ರಾಜಕಾರಣವೆಂದು ಕರೆದರಾ? ರಾಜಕಾರಣಕ್ಕೂ ಸಿಬಿಐ ಇಡಿ ವಿಚಾರಣೆಗಳಿಗೂ ಯಾವುದೇ ಸಂಬಂಧವಿಲ್ಲ. ರಾಜಕಾರಣಕ್ಕಾಗಿ ಕಾಂಗ್ರೆಸ್‍ನವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದು ಯಾರಿಗೂ ಶೋಭೆಯಲ್ಲ ಎಂದು ತಿಳಿಸಿದರು.