ನವದೆಹಲಿ(ಫೆ.06): ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಕಳೆದ ತಿಂಗಳಿನಿಂದ ಅಧಿಕೃತವಾಗಿ ರಾಜಕೀಯಕ್ಕೆ ಸೇರಿಕೊಂಡಿದ್ದಾರೆ. ಪ್ರಿಯಾಂಕ ರಾಜಕೀಯ ಜೊತೆ ಸಮಾಜ ಸೇವೆಯಲ್ಲಿಯೂ ಸಹ ತೊಡಗಿಕೊಂಡಿದ್ದಾರೆ.

ಹೌದು ಪ್ರಿಯಾಂಕ ದೆಹಲಿಯ ಜೌರಂಗ್‍ಜೇಬ್‍ನಲ್ಲಿ ದೈಹಿಕ ಸ್ವಾಧೀನ ಕಳೆದುಕೊಂಡಿರುವ ಆಶೀಶ್ ಎಂಬ ಬಾಲಕನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಆತನ ಪ್ರತಿ ಹಂತದ ಚಿಕಿತ್ಸೆಗೂ ಸ್ಪಂಧಿಸುತ್ತಿದ್ದಾರೆ.

ಪ್ರಿಯಾಂಕ ಗಾಂಧಿ ಪ್ರತಿ ಎರಡು ತಿಂಗಳಿಗೊಮ್ಮೆ ನಮ್ಮ ಮನೆಗೆ ಭೇಟಿ ನೀಡುತ್ತಾರೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಆಶೀಶ್ ಅವರ ಚಿಕತ್ಸೆಗೆ ಅವರು ಸಹಾಯ ಮಾಡುತ್ತಿದ್ದಾರೆ ಹಾಗೂ ಅವರು ನಮ್ಮ ಮನೆಗೆ ಬಂದು ಆರೋಗ್ಯ ವಿಚಾರಿಸುತ್ತಾರೆ ಎಂದು ಆಶೀಶ್ ತಂದೆ ಸುಭಾಷ್ ಯಾದವ್ ಸುದ್ದಿ ಸಂಸ್ಥೆ ಎ.ಎನ್.ಐ ಗೆ ತಿಳಿಸಿದ್ದಾರೆ.


ಇಲ್ಲಿಯವರೆಗೂ ಯಾವುದೇ ನಾಯಕರು ಇಲ್ಲಿಗೆ ಬಂದಿಲ್ಲ, ಆದರೆ ಪ್ರಿಯಾಂಕ ಮತ್ತು ರಾಹುಲ್ ಅವರು ತಮ್ಮ ಕುಟುಂಬದಂತೆಯೇ ನನ್ನ ಮಗನ ಚಿಕಿತ್ಸೆಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಹೋದರಿ ಪ್ರಿಯಾಂಕನಂತೆ ರಾಹುಲ್ ಗಾಂಧಿ ಸಹ ನಿರ್ಭಯ ಅವರ ಸಹೋದರನ ಜೀವನಕ್ಕೆ ಸಹಾಯ ಹಸ್ತ ಚಾಚಿದ್ದು, ಇಂದು ಆತ ಪೈಲಟ್ ತರಬೇತಿಯನ್ನು ಪೊರ್ಣಗೊಳಿಸಿ ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಕಾರಣಕರ್ತರಾಗಿದ್ದಾರೆ.

ದೆಹಲಿಯಲ್ಲಿ 2012 ರಲ್ಲಿ ಮಾನವ ಸಮಾಜವೇ ತಲೆ ತಗ್ಗಿಸುವಂತಹ ಕ್ರೂರ ಅತ್ಯಚಾರಕ್ಕೆ ನಿರ್ಭಯಾ ಬಲಿಯಾಗಿದ್ದರು. ಈ ಘಟನೆಯ ನಂತರ ಆ ಕುಟುಂಬಕ್ಕೆ ಪ್ರತಿ ಹಂತದಲ್ಲಿಯೂ ಸಹಾಯ ಮಾಡುವುದಾಗಿ ರಾಹುಲ್ ಭರವಸೆ ನೀಡಿದ್ದರು.

ಅದರಂತೆ ರಾಹುಲ್ ನಮ್ಮ ಕುಟುಂಬಕ್ಕೆ ಸಹಾಯ ಮಾಡಿದ್ದರೆ ನನ್ನ ಮಗ ಸರ್ಕಾರಿ ಅನುದಾನಿತ ಸ್ವಾಯತ್ತ ಸಂಸ್ಥೆಯಾದ ಇಂದಿರಾ ಗಾಂಧಿ ರಾಷ್ಟ್ರೀಯ ಉರಾನ್ ಅಕಾಡಮಿಯಲ್ಲಿ ಪೈಲಟ್ ತರಬೇತಿಯನ್ನು ಪಡೆಯಲು ಅವರೇ ಕಾರಣ ಎಂದು ನಿರ್ಭಯ ತಂದೆ ಇತ್ತೀಚೆಗೆ ಮಾಧ್ಯಮವೋದಕ್ಕೆ ತಿಳಿಸಿದ್ದರು

ಪ್ರಿಯಾಂಕ ಮತ್ತು ರಾಹುಲ್ ರಾಜಕೀಯ ಹೊರತಾಗಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು ಸಾವಿರಾರು ಲೈಕ್ಸ್ ಗಳು ಹರಿದು ಬಂದಿವೆ. ಆದರೆ ಇದನ್ನು ಕೆಲವರು ರಾಜಕೀಯ ಗಿಮಿಕ್ಸ್ ಅಂತಾನೂ ಸಹ ಕಾಂಮೆಟ್ಸ್ ಹಾಕಿದ್ದಾರೆ.

ಒಟ್ಟಿನಲ್ಲಿ ಗಾಂಧಿ ಕುಡಿಗಳ ಈ ಸಮಾಜ ಸೇವೆ ನಿಜಕ್ಕೂ ಮಾನವೀಯತೆಯನ್ನು ಬಿಂಬಿಸುತ್ತಿದ್ದು ದೇಶದ ಎಲ್ಲಾ ರಾಜಕಾರಣಿಗಳು ಸಹ ಇದರತ್ತ ಗಮನ ಹರಿಸಿದರೆ ದೇಶದ ಎಷ್ಟೋ ಬಡ ಜನರ ಶಿಕ್ಷಣ ಮತ್ತು ಅರೋಗ್ಯ ಪರಿಸ್ಥಿತಿ ಸುಧಾರಣೆಯಾಗಲಿದೆ.