ಬೆಂಗಳೂರು(ಫೆ. 13): ಆಪರೇಷನ್ ಕಮಲ ಹಲವು ದಿನಗಳಿಂದ ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿರುವ ವಿಷಯ. ಹೌದು ಮೈತ್ರಿ ಸರ್ಕಾರವನ್ನು ಗದ್ದುಗೆಯಿಂದ ಉರುಳಿಸುವ ದೃಷ್ಟಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದ ತಂಡ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಶಾಸಕರನ್ನು ತಮ್ಮತ್ತ ಸೆಳೆಯುವಲ್ಲಿ ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದರು.

ಆದರೆ ಈಗ ಆಪರೇಷನ್ ಕಮಲದ ಆಡಿಯೋ ಬಿಡುಗಡೆಯಾಗಿದ್ದು, ರಾಜ್ಯ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಬೆನ್ನಲ್ಲೆ ಹಾಸನದ ಬಿಜೆಪಿ ಶಾಸಕ ಪ್ರೀತಮ್ ಗೌಡ ಜೆಡಿಎಸ್ ವರಿಷ್ಠ ದೇವೆಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಆಡಿಯೋ ಬಿಡುಗಡೆಯಾಗಿದ್ದು. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಪ್ರಿತಂ ಗೌಡ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಕಲ್ಲು ತೂರಾಟದಲ್ಲಿ ಪ್ರೀತಂ ಗೌಡ ಅವರ ಬೆಂಬಲಿಗನೊಬ್ಬನಿಗೆ ಗಂಭೀರ ಗಾಯವಾಗಿದೆ.

ದೇವೇಗೌಡರು ಇನ್ನೇನು ಸಾಯುತ್ತಾರೆ, ಕುಮಾರಸ್ವಾಮಿ ಆರೋಗ್ಯ ಸರಿಯಿಲ್ಲ, ಜೆಡಿಎಸ್ ಫಿನಿಶ್ ಎಂದು ಪ್ರೀತಂ ಗೌಡ ಮಾತನಾಡಿದ್ದಾರೆ ಎನ್ನಲಾಗಿದೆ.

ಪ್ರೀತಂ ಗೌಡ ಒಬ್ಬ ಜನಪ್ರಿಯ ಶಾಸಕ. ಅವರ ಬೆಳವಣಿಗೆಯನ್ನು ಸಹಿಸದೆ ಈ ಗಲಾಟೆ ಮಾಡಲಾಗುತ್ತಿದೆ. ಇದು ಗೂಂಡಾ ಸರಕಾರವಾಗಿದೆ. ಈ ದಾಳಿ ಘಟನೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಅವರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಬಳಿ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.

ಪ್ರೀತಮ್ ಗೌಡ ಅವರ ನಿವಾಸದ ಮೇಲೆ ಜೆಡಿಎಸ್ ಶಾಸಕರಿಂದ ನಡೆದಿರುವ ದಾಳಿಯನ್ನು ಬಿಜೆಪಿಯ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ ಮೊದಲಾದವರು ಬಲವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಪ್ರೀತಮ್ ಗೌಡ ಅವರು, ತಾನು ಇಂಥದ್ದಕ್ಕೆಲ್ಲಾ ಜಗ್ಗುವುದಿಲ್ಲ. ತಮ್ಮ ಹೋರಾಟವನ್ನು ಇನ್ನಷ್ಟು ಮುಂದುವರಿಸುವುದಾಗಿ ಹೇಳಿದ್ದಾರೆ.