ಮಂಗಳೂರು(ಜೂನ್.26) ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಟೀಕೆಗೆ ಸಿಎಂ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜ್ ತಿರುಗೇಟು ನೀಡಿದ್ದಾರೆ.

ಬಿಜೆಪಿಯವರು ಜೈಲು ವಾಸ್ತವ್ಯ ಮಾಡಿದವರು, ಅವರಿಗೆ ಗ್ರಾಮವಾಸ್ತವ್ಯದ ಪರಿಕಲ್ಪನೆ ಇಲ್ಲ ಎಂದು ನುಡಿದರು. ನಾವೇನಾದರೂ ಗ್ರಾಮವಾಸ್ತವ್ಯ ಮಾಡಿದರೆ ಇಡೀ ಗ್ರಾಮದ ಕಲ್ಪನೆ, ಚಿಂತನೆ ಬದಲು ಮಾಡುತ್ತೇವೆ. ಇದು ಎಲ್ಲರಿಗೂ ಮಾದರಿಯಾಗುವಂತಹ ಕಾರ್ಯಕ್ರಮ. ಇದಕ್ಕೆ ಕುಮಾರಸ್ವಾಮಿಯವರಿಗೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಇನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಸಿಎಂ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಹಣ ಖರ್ಚು ಮಾಡುವುದರಿಂದ ಜನರಿಗೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿರುವುದಕ್ಕೆ ಐವಾನ್ ಡಿಸೋಜ ತಿರುಗೇಟು ನೀಡಿದ್ದು ಪೂಜಾರಿಯವರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಪ್ರತಿನಿಧಿ. ಆಡಳಿತ ಅನುಭವ, ಯೋಜನೆಗಳು ಜನರ ಬಗ್ಗೆ ಕಾಳಜಿಯಿಲ್ಲ. ಗ್ರಾಮದ ಪರಿಕಲ್ಪನೆ, ದೇಶದ ಬೆಳವಣಿಗೆಯ ಕಾಳಜಿ ಇರುವವರು ಈ ರೀತಿಯ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.