ಬೆಂಗಳೂರು (ಜ.18): ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಇಡೀ ದೇಶವೆ ಪ್ರಾರ್ಥಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಪ್ರರ್ಥಾನೆ ಮಾಡಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಪರಮಪೂಜ್ಯ ಡಾಕ್ಟರ್ ಶ್ರೀ ಶಿವಕುಮಾರ ಸ್ವಾಮಿಗಳವರದು ಅಮೋಘ ವ್ಯಕ್ತಿತ್ವ . ಅವರ ಸೇವೆ ಕೋಟ್ಯಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಶ್ರೀಗಳು ಬೇಗ ಗುಣ ಮುಖರಾಗಲಿ ಎಂದು ಹಾಗೂ ದೇವರು ಅವರಿಗೆ ಉತ್ತಮ ಆರೋಗ್ಯ ಕರುಣಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

ವೈದ್ಯ ಲೋಕಕ್ಕೂ ಅಚ್ಚರಿ ಮೂಡಿಸಿದ ಸಿದ್ದಗಂಗಾ ಶ್ರೀಗಳ ಆರೋಗ್ಯ; ಚಿಕಿತ್ಸೆಗೆ ಸ್ಪಂದಿಸುತ್ತಿರುವ ನಡೆದಾಡುವ ದೇವರು ಚಿಕಿತ್ಸೆಗೆ ಶ್ರೀಗಳ ದೇಹವು ನಿರೀಕ್ಷಿಸಿದಷ್ಟು ಸ್ಪಂದನೆ ನೀಡುತ್ತಿಲ್ಲ. ವೈದ್ಯಕೀಯವಾಗಿ ಏನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ವೈದ್ಯರು ಹತಾಶೆ ಹೊರಚೆಲ್ಲಿದ್ದಾರೆ.

ಇನ್ನು ನಡೆದಾಡುವ ದೇವರ ಆರೋಗ್ಯ ಇಂದು ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸ್ಪಂದಿಸುತ್ತಿದೆ. ಶ್ರೀಗಳು ಪವಾಡ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಿದ್ದಗಂಗಾ ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಗ್ಗೆಯಿಂದ ಮಠದ ಮಕ್ಕಳು ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಶ್ರೀಗಳು ಶೀಘ್ರ ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಶ್ರೀಗಳ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಭಕ್ತರು, ರಾಜಕಾರಣಿಗಳು ಆಗಮಿಸುತ್ತಿದ್ದಾರೆ.