ಬೆಂಗಳೂರು:(ಜೂ.07): ಆರ್ಥಿಕವಾಗಿ ಸಬಲರು ಹಾಗೂ ದುರ್ಬಲರ ನಡುವೆ ಇರುವ ಕಂದಕವನ್ನು ಮುಚ್ಚಲು ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಕಲಿಸಿ ಎಂದು ಕರಡು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ) ಶಿಫಾರಸು ಮಾಡಿದೆ.

ತ್ರಿಭಾಷಾ ಸೂತ್ರದ ಪ್ರಕಾರ ಹಿಂದಿ ಹೇರಿಕೆಗೆ ಎನ್‍ಇಪಿ ಯತ್ನಿಸುತ್ತಿದೆ ಎಂಬ ವಾದ-ವಿವಾದಗಳ ನಡುವೆ, ಕರಡು ಶಿಕ್ಷಣ ನೀತಿಯಲ್ಲಿ ಇಂಗ್ಲಿಷ್ ಕುರಿತು ಪ್ರಸ್ತಾಪವಾಗಿರುವ ಈ ಅಂಶ ಯಾರ ಗಮನವನ್ನೂ ಸೆಳೆದಿಲ್ಲ. ಸಾವಿರ ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸಿರುವ ರಾಜ್ಯ ಸರಕಾರದ ನೀತಿ ಚರ್ಚೆಗೆ ಒಳಗಾಗಿರುವ ಬೆನ್ನಲ್ಲಿಯೇ ಪ್ರಕಟವಾಗಿರುವ ಶಿಕ್ಷಣ ನೀತಿ, ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭಾಷಾ ನಿರ್ಧಾರಕ್ಕೆ ಬೆಂಬಲವಾಗಿಯೇ ನಿಂತಿದೆ.

ಶಿಕ್ಷಣದಲ್ಲಿ ಕಲಿಕಾ ಮಾಧ್ಯಮವಾಗಿ ಹಾಗೂ ಆಡುಭಾಷೆಯಾಗಿ(ಸಂವಹನ ಮಾಧ್ಯಮ) ಇಂಗ್ಲಿಷ್ ಇರುವುದೇ ಸೂಕ್ತ ಎಂಬ ಧೋರಣೆ ಸಮಾಜದಲ್ಲಿ ಹೆಚ್ಚುತ್ತಿದೆ. ಇದು ದುರದೃಷ್ಟಕರ ಬೆಳವಣಿಗೆ. ಆದರೆ, ಇದಕ್ಕೆ ಕಾರಣಗಳೂ ಇವೆ. ಸ್ವಾತಂತ್ರ್ಯದ ಬಳಿಕ ಪ್ರತಿಷ್ಠಿತ ಸಮುದಾಯದ ಮಂದಿ ಇಂಗ್ಲಿಷ್ ಅನ್ನು ತಮ್ಮ ವ್ಯಾವಹಾರಿಕ ಭಾಷೆಯನ್ನಾಗಿ ಅಪ್ಪಿಕೊಂಡರು. ಇಂಥವರ ಪ್ರಮಾಣ ದೇಶದಲ್ಲಿರುವುದು ಒಟ್ಟು ಜನಸಂಖ್ಯೆಯ ಶೇ.15ರಷ್ಟು ಮಾತ್ರ. ಕಾಕತಾಳೀಯ ಎಂದರೆ, ಈ ಸಮುದಾಯ ಆರ್ಥಿಕವಾಗಿ ಸಬಲೀಕರಣಗೊಂಡಿದೆ,” ಎಂದು ಹೇಳಿದೆ.

ಇಂಗ್ಲಿಷ್ ಪ್ರಭುತ್ವದಿಂದಾಗಿ ದೇಶದ ಬಹುಸಂಖ್ಯಾತ ಸಮುದಾಯ ಉತ್ತಮ ವೇತನ ಪಡೆಯದ ನೌಕರಿಗಳಿಂದ ವಂಚಿತವಾಗಿದೆ. ಜತೆಗೆ, ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಕಂಡಿರುವ ಮೇಲ್‍ಮಧ್ಯಮ ವರ್ಗದ ಶ್ರೆಣಿಗೂ ಸೇರದೇ ತೊಳಲಾಡುತ್ತಿದೆ. ಹಾಗಾಗಿ ಸರಕಾರ ಇಂಗ್ಲಿಷ್ ಹಾಗೂ ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಬೇಕು. ಎಂದು ಸೂಚಿಸಿದೆ. ಸರಕಾರಿ ಶಾಲೆಗಳಲ್ಲಿ ಸ್ಥಳೀಯ ಪ್ರಾದೇಶಿಕ ಭಾಷೆಯ ಜತೆಗೆ ಇಂಗ್ಲಿಷ್ ಅನ್ನು ಕಲಿಸಲೇಬೇಕಿದೆ. ಈ ವೇಳೆ, ಎಲ್ಲರಿಗೂ ಸುಲಭವಾಗಿ ದೊರೆಯುವಂತ ಗುಣಮಟ್ಟದ ಇಂಗ್ಲಿಷ್ ಕಲಿಕೆಗೆ ಅವಕಾಶ ನೀಡಬೇಕು. ಸ್ಪಷ್ಟ ಹಾಗೂ ಸುಲಲಿತವಾದ ಇಂಗ್ಲಿಷ್ ಕಲಿಕೆಗೆ ಪ್ರಾಮುಖ್ಯತೆ ನೀಡಬೇಕು,” ಎಂದು ಸಮಿತಿ ಸಲಹೆ ನೀಡಿದೆ.

ಇನ್ನು ಮದರಸಾ ಹಾಗೂ ಸಾಂಪ್ರದಾಯಿಕ ವಿದ್ಯಾಸಂಸ್ಥೆಗಳಲ್ಲೂ ಆಧುನಿಕ ಪಠ್ಯಕ್ರಮ ಅಳವಳಡಿಕೆ ಹಾಗೂ ಇಂಗ್ಲಿಷ್ ಕಲಿಕೆಗೆ ಒತ್ತು ನೀಡಬೇಕಿದ್ದು, ಸರಕಾರ ಇಂಥ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಬೇಕಿದೆ ಎಂದು ಶಿಫಾರಸ್ಸು ಮಾಡಲಾಗಿದೆ