ಬೆಂಗಳೂರು(ಜುಲೈ.13) ಕಾಂಗ್ರೆಸ್ ಪಕ್ಷದಲ್ಲಿ ನನ್ನ ಅಪ್ಪ ಮೂಲೆಗುಂಪಾಗಲು ಕಾರಣ ಒಬ್ಬ ಸೋಕಾಲ್ಡ್ ಸ್ಟೇಟ್ ಲೀಡರ್. ನಮ್ಮ ತಂದೆ ಏಕೆ ರಾಜೀನಾಮೆ ನೀಡಿದರು ಎಂದು ನಾನು ಹೊಸದಾಗಿ ಹೇಳಬೇಕೇ? ಅದು ನಿಮಗೂ ಗೊತ್ತಿದೆ’ ಎಂದು ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು.

‘ನನ್ನ ಅಪ್ಪ 45 ವರ್ಷಗಳಿಂದ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರು ಯಾವುದೇ ಹುದ್ದೆ ಬೇಕೆಂದು ಕೇಳಿದವರಲ್ಲ. ಕಾಂಗ್ರೆಸ್‌ನಲ್ಲಿ 45 ವರ್ಷಗಳಿಂದ ಇದ್ದು ಪಕ್ಷ ಕಟ್ಟಿದವರು ಎಷ್ಟು ಜನರಿದ್ದಾರೆ ಹೇಳಿ ? ಒಂದು ಕಾಲದಲ್ಲಿ ಐದು ಜಿಲ್ಲೆಗಳಿಗೆ ಇವರೊಬ್ಬರೇ ಕಾಂಗ್ರೆಸ್ ಶಾಸಕರಾಗಿದ್ದರು. ಒಮ್ಮೆಯೂ ಸರ್ಕಾರಿ ಬಂಗಲೆಯನ್ನು ಅವರು ಬಳಸಿಲ್ಲ. 7 ಬಾರಿ ಶಾಸಕ ಮತ್ತು ಸಚಿವರಾಗಿ ಕಾರ್ಯನಿರ್ವಹಿಸಿರುವ ಅವರನ್ನು ಮೈತ್ರಿ ಪಕ್ಷದಲ್ಲಿ ಮೂಲೆಗುಂಪು ಮಾಡಿದೆ. ಇದಕ್ಕೆ ಖಾರಣ ಸೋಕಾಲ್ಡ್ ಲೀಡರ್. ಅವರ ಹೆಸರನ್ನು ಹೇಳಲು ನಾನು ಇಷ್ಟಪಡುವುದಿಲ್ಲ’ ಎಂದು ಹೇಳಿದರು.

ನನ್ನ ತಂದೆ ಕೆಲವು ನಾಯಕರು ಹೇಗೆ ನಡೆಸಿಕೊಂಡರು ಎನ್ನುವುದು ತಿಳಿದಿದೆ. ಇಷ್ಟು ವರ್ಷ ಪಕ್ಷಕ್ಕಾಗಿ ದುಡಿದ ನನ್ನ ತಂದೆ ರಾಮಲಿಂಗರೆಡ್ಡಿ ಅವರು ರಾಜೀನಾಮೆ ನೀಡಿದ ಬಳಿಕ ಮನವೊಲಿಕೆಗೆ ಮುಂದಾಗುತ್ತಿದ್ದಾರೆ. ಅವರಿಗೆ ನನ್ನ ತಂದೆಯ ಬೆಲೆ ಈಗ ಗೊತ್ತಾಯಿತೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಾನು ಒಂದು ವರ್ಷದಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ರೂಪಾಯಿ ಲಂಚ ತೆಗೆದುಕೊಂಡಿಲ್ಲ. ಆ ರೀತಿಯ ಆರೋಪ ಸಾಬೀತಾದರೆ ಇವತ್ತೇ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಶಾಸಕಾಂಗ ಪಕ್ಷದ ಸಭೆಗೂ ನಾನು ಹಾಜರಾಗಿದ್ದೆ. ಕಾಂಗ್ರೆಸ್ ಸದಸ್ಯೆಯಾಗಿ ಶಾಸಕಿಯಾಗಿ ನನ್ನ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ ಎಂದು ಸೌಮ್ಯ ರೆಡ್ಡಿ ಹೇಳಿದರು.