ತುಮಕೂರು:(ಫೆ19): ಚಿಕ್ಕಮಗಳೂರಿನ ಶಾಸಕ ಸಿ.ಟಿ ರವಿಯವರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಸ್ನೇಹಿತರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಶಾಸಕ ಸಿ.ಟಿ ರವಿ ವಿರುದ್ಧ ವಿರೋಧಗಳು ವ್ಯಕ್ತವಾಗುತ್ತಿದ್ದು, ಸ್ಥಳದಲ್ಲಿ ಗಾಯಗೊಂಡವರಿಗೆ ಸ್ಪಂದಿಸುವುದನ್ನು ಬಿಟ್ಟು ಪರಾರಿಯಾಗಿರುವುದು ನಾಗರೀಕರ ಹಾಗೂ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆ ತುಮಕೂರಿನ ಕುಣಿಗಲ್ ತಾಲ್ಲೂಕಿನ ಊರ್ಕೇನ ಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಸುನಿಲ್ ಗೌಡ ಹಾಗೂ ಶಶಿಕುಮಾರ್ ಮೃತಪಟ್ಟವರೆಂದು ತಿಳಿದು ಬಂದಿದೆ. ಅಪಘಾತ ಸಂಭವಿಸಿದ ವೇಳೆ ಸಿ.ಟಿ ರವಿಯವರು ಮಾನವೀಯತೆ ಮೆರೆಯುವುದನ್ನು ಬಿಟ್ಟು, ಬೇಜವಬ್ದಾರಿಯನ್ನು ತೋರಿದ್ದಾರೆಂದು ಕುಣಿಗಲ್ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಯುತ್ತಿದೆ.

ಇನ್ನು ದೂರಿನ ಪತ್ರದಲ್ಲಿ ಶಾಸಕ ಸಿ.ಟಿ ರವಿ ಹಾಗೂ ಕಾರು ಚಾಲಕನ ಹೆಸರು ನಮೋದಿಸದಿರುವುದು ಮತ್ತಷ್ಟು ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ. ಇನ್ನು ಮಕ್ಕಳನ್ನು ಕಳೆದು ಕೊಂಡ ಪೋಷಕರ ದುಃಖ ಮುಗಿಲು ಮುಟ್ಟಿದ್ದು, ಮಕ್ಕಳನ್ನು ಕಷ್ಟಪಟ್ಟು ದುಡಿದು ಸಾಕಿದ್ದು, ಮೃತರಾದ ಸುನಿಲ್ ಹಾಗೂ ಶಶಿಕುಮಾರ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಈಗ ತಮ್ಮನ್ನು ಸಾಕುವ ಮಕ್ಕಳನ್ನು ಕಳೆದುಕೊಂಡಿದ್ದು, ಹೆತ್ತವರು ತಡೆಯಲಾರದ ದುಃಖದಲ್ಲಿದ್ದು, ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದಾರೆ.