ಹುಬ್ಬಳ್ಳಿ(ಜೂ:27): ಎರಡು ಪಕ್ಷಗಳು ಸೇರಿ ಅಧಿಕಾರ ನಡೆಸುವಾಗ ಸಮಸ್ಯೆ ಸಹಜ,ಅವುಗಳನ್ನು ಸರಿಪಡಿಸಿಕೊಂಡು ಸರ್ಕಾರ ಮುಂದುವರಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬದಾಮಿಗೆ ತೆರಳುವ ಮುನ್ನ ಗುರುವಾರ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಲೋಕಸಭಾ ಚುನಾವಣೆಯಲ್ಲಿ ನಮ್ಮ ಸೋಲಿಗೆ ಹಲವಾರು ಕಾರಣಗಳಿವೆ. ಮೈತ್ರಿ ಮಾಡಿಕೊಂಡಿದ್ದೇ ಸೋಲಿಗೆ ಕಾರಣ ಎಂದು ಯಾರೂ ಹೇಳಿಲ್ಲ. ಎಲ್ಲ ವಿಷಯಗಳನ್ನೂ ಬಹಿರಂಗವಾಗಿ ಚರ್ಚಿಸಲು ಆಗುವುದಿಲ್ಲ’ ಎಂದರು.

‘ಪಕ್ಷದ ಸಭೆಯಲ್ಲಿ ಕೆಸಿಸಿಸಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಹಾಗೂ ಬೂತ್‌ ಮಟ್ಟದಲ್ಲಿ ಪಕ್ಷ ಬಲವರ್ಧನೆ ಕುರಿತು ಚರ್ಚಿಸಿದ್ದೇವೆ. ಬ್ಲ್ಯಾಕ್‌ ಮತ್ತು ಬೂತ್‌ ಕಮಿಟಿಗಳ ನಡುವೆ ಸಂವಹನ ಸಾಧಿಸಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಮಿಟಿ ರಚಿಸುತ್ತೇವೆ’ ಎಂದರು.

ಇದೇ ವೇಳೆ ವೋಟ್‌ ಹಾಕೋದು ಮೋದಿಗೆ, ಕೆಲಸ ನನ್ನ ಬಳಿ ಕೇಳ್ತಿರಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ಅವರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ’ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.