ಲಾಹೋರ್(ಮಾ:27) : ಭ್ರಷ್ಟಾಚಾರ ಪ್ರಕರಣ ಸಂಬಂಧ ಜೈಲುವಾಸ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ವೈದ್ಯಕೀಯ ಚಿಕಿತ್ಸೆ ಕಾರಣ ನವಾಜ್‌ ಅವರಿಗೆ ಸುಪ್ರೀಂ ಕೋರ್ಟ್ ಆರು ವಾರಗಳ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ದೇಶದೊಳಗೆ ಚಿಕಿತ್ಸೆಗೆ ಒಳಪಡಬೇಕೆಂದು ಸೂಚಿಸಿದೆ.
ಕಳೆದ ಕೆಲವು ತಿಂಗಳಿಂದ ನವಾಜ್ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದರು. ಆಗ ಪೀಠವು 50 ಲಕ್ಷದ ಎರಡು ಜಾಮೀನು ಬಾಂಡ್‌ ನೀಡಬೇಕೆಂದು ಸೂಚಿಸಿತ್ತು.

69 ವರ್ಷದ ಷರೀಫ್‌ಗೆ ಅಲ್‌- ಅಜೀಜಿಯಾ ಸ್ಟೀಲ್‌ ಮಿಲ್ಸ್‌ ಪ್ರಕರಣದಲ್ಲಿ ಇಸ್ಲಾಮಾಬಾದ್‌ ಕೋರ್ಟ್‌ ಏಳು ವರ್ಷಗಳ ಶಿಕ್ಷೆ ವಿಧಿಸಿದೆ. ಲಾಹೋರ್‌ನ ಕೋಟ್‌ ಲಖ್‌ಪತ್‌ ಜೈಲಿನಲ್ಲಿ ಕಳೆದ ಡಿಸೆಂಬರ್‌ನಿಂದ ಶಿಕ್ಷೆ ಅನುಭವಿಸುತ್ತಿದ್ದರು.