ನವದೆಹಲಿ(ಫೆ.12): ರಫೇಲ್ ಹಗರಣದಲ್ಲಿ ಅನಿಲ್ ಅಂಬಾನಿ ಮತ್ತು ಫ್ರಾನ್ಸ್ ನಡುವೆ ಮಧ್ಯವರ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಿಸಿದ್ದಾರೆ ಎಂದು ಕಾಂಗ್ರೆಸ್ ಅದ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ರಫೇಲ್ ಒಪ್ಪಂದ ಸಂಬಂಧ ಹೊಸದೊಂದು ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ. ಮೋದಿಯವರು ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ.
ರಫೇಲ್ ಒಪ್ಪಂದಕ್ಕೂ ಹತ್ತು ದಿನಗಳ ಮೊದಲೇ ಅನಿಲ್ ಅಂಬಾನಿ ಫ್ರಾನ್ಸ್ ರಕ್ಷಣಾ ಇಲಾಖೆಯ ಕಚೇರಿಗೆ ಭೇಟಿ ನೀಡಿದ್ದರು ಎಂದು ಹೇಳಿದ್ದಾರೆ.

ರಫೇಲ್ ಒಪ್ಪಂದ ನಡೆದಿದ್ದು, ರಕ್ಷಣಾ ಸಚಿವರು ಹಾಗೂ ಇಲಾಖೆ ಕಾರ್ಯದರ್ಶಿಗೂ ಗೊತ್ತಿಲ್ಲ. ಹೆಚ್‍ಎಎಲ್ ಗೂ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಸಚಿವರು ಹೇಳುತ್ತಾರೆ. ಹಾಗಾದಾರೆ ಒಪ್ಪಂದ ವ್ಯವಹಾರ ಅನಿಲ್ ಅಂಬಾನಿಗೆ ತಿಳಿದಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಒಪ್ಪಂದಕ್ಕೂ ಮೊದಲೇ ಅನಿಲ್ ಅಂಬಾನಿ ಫ್ರಾನ್ಸ್ ಗೆ ತೆರಳಿದ್ದು ಹೇಗೆ. ರಫೇಲ್ ಒಪ್ಪಂದದ ಕುರಿತು ಮಾಹಿತಿಯನ್ನು ಅನಿಲ್ ಅಂಬಾನಿ ನೀಡಿದ್ದು ಯಾರು ಈ ಸಂಬಂಧ ಕೂಡಲೇ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದ ಅವರು ಈ ಸಂಬಂಧ ಇಮೇಲ್ ದಾಖಲೆಯನ್ನು ರಾಹುಲ್ ಬಿಡುಗಡೆ ಮಾಡಿದ್ದಾರೆ.