ನವದೆಹಲಿ(ಮಾ:27): ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಆರಂಭವಾಗಿದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ತಾವು ಇಂದು 11-45 ರಿಂದ 12 ಗಂಟೆಯೊಳಗಾಗಿ ದೇಶದ ಜನರನ್ನುದ್ದೇಶಿಸಿ ಮಾತನಾಡಲಿದ್ದು, ಒಂದು ಮಹತ್ವದ ಸಂದೇಶ ನೀಡಬೇಕಾಗಿದೆ ಎಂದು ಟ್ವೀಟ್ ಮಾಡಿದ್ದರು.

ಅವರ ಭಾಷಣಕ್ಕಾಗಿ ದೇಶದ ಜನತೆ ಕಾದು ಕುಳಿತಿದ್ದ ನಡುವೆ ತಾವು ಹೇಳಿದಕ್ಕಿಂತ ಕೊಂಚ ವಿಳಂಬವಾಗಿ ಅಂದರೆ 12-24 ಗಂಟೆ ಸುಮಾರಿಗೆ ಮಾತನಾಡಿರುವ ನರೇಂದ್ರ ಮೋದಿಯವರು ಮಹತ್ವದ ಮಾಹಿತಿಯೊಂದನ್ನು ಪ್ರಕಟಿಸಿದ್ದಾರೆ.

ಅಮೆರಿಕಾ, ರಷ್ಯಾ ಹಾಗೂ ಚೀನಾದ ನಂತರ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದು, ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಹೊರ ಹೊಮ್ಮಿದೆ ಎಂಬ ಹೆಮ್ಮೆಯ ಸಂಗತಿಯನ್ನು ನರೇಂದ್ರ ಮೋದಿ ಘೋಷಿಸಿದ್ದಾರೆ. ಮಿಶನ್ ಶಕ್ತಿ ಎಂಬ ಈ ಆಪರೇಶನ್ ಅತ್ಯಂತ ಕಠಿಣವಾಗಿತ್ತು. ಆದರೆ ಭಾರತದ ವಿಜ್ಞಾನಿಗಳು ಇದನ್ನು ಯಶಸ್ವಿಗೊಳಿಸಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತದ ಈ ಮಹತ್ತರ ಸಾಧನೆಯಿಂದ ಸ್ಯಾಟಲೈಟ್ ಹೊಡೆದುರುಳಿಸುವ ತಂತ್ರಜ್ಞಾನವನ್ನು ಭಾರತ ಹೊಂದಿದಂತಾಗಿದೆ ಎಂದಿದ್ದಾರೆ.