ಒಕಾಸ(ಜೂ:27): ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಜಪಾನ್ ಗೆ ಆಗಮಿಸಿದ್ದು ನಾಳೆ ಮತ್ತು ನಾಡಿದ್ದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದು ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಜಿ20 ಶೃಂಗಸಭೆ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆಗಳು ಮುಂದಿನ ಎರಡು ದಿನಗಳಲ್ಲಿ ನಡೆಯಲಿವೆ.

ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳನ್ನು ಮತ್ತು ಭಾರತದ ದೃಷ್ಟಿಕೋನವನ್ನು ಜಗತ್ತಿನ ನಾಯಕರಿಗೆ ಪ್ರಧಾನಿ ಮೋದಿ ತಲುಪಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ. ಸುಧಾರಿತ ಬಹುಪಕ್ಷೀಯತೆಯನ್ನು ಬೆಂಬಲಿಸಲು ಪುನರುಚ್ಛರಿಸಿ ಬಲಪಡಿಸಲು ಶೃಂಗಸಭೆ ಮುಖ್ಯ ಅವಕಾಶ ನೀಡಲಿದೆ. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಿಯಮ ಆಧಾರಿತ ಅಂತರರಾಷ್ಟ್ರೀಯ ಕ್ರಮವನ್ನು ಕಾಪಾಡಲು ಇದು ನಿರ್ಣಾಯಕವಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ಭಾರತದ ಬಲಿಷ್ಠ ಅಭಿವೃದ್ಧಿಶೀಲ ಅನುಭವಗಳನ್ನು ಹಂಚಿಕೊಳ್ಳಲು ಶೃಂಗಸಭೆ ವೇದಿಕೆಯಾಗಲಿದ್ದು ಮುಂದಿನ ದಿನಗಳಲ್ಲಿ ಸ್ಥಿರ ಬೆಳವಣಿಗೆಗೆ ಇದೊಂದು ದಾರಿಯಾಗಿ ಮುಂದುವರಿಯಲಿದೆ ಎಂದು ಮೋದಿ ಹೇಳಿದ್ದಾರೆ.