ಮೈಸೂರು(ಜು:15): ಮೈಸೂರು ಜಿಲ್ಲೆಯ ಅರಸನಕೆರೆ ಗ್ರಾಮದಲ್ಲಿ ಬೃಹತ್ ನಂದಿ ವಿಗ್ರಹಗಳು ಪತ್ತೆಯಾಗಿವೆ. ಗ್ರಾಮದ ಜಮೀನಿನಲ್ಲಿ ಸುಮಾರು 12 ಅಡಿಗೂ ಮೀರಿದ ಎರಡು ನಂದಿ ವಿಗ್ರಹಗಳು ಪತ್ತೆಯಾಗಿವೆ. 15 ಅಡಿ ಮಣ್ಣಿನ ಆಳದಲ್ಲಿ ಮುಚ್ಚಿಹೋಗಿದ್ದ ಈ ವಿಗ್ರಹಗಳು ಸುಮಾರು ನೂರೈವತ್ತು ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಅತ್ಯಂತ ದೊಡ್ಡದಾದ ನಂದಿ ವಿಗ್ರಹಗಳು ಎಂದು ಹೇಳಲಾಗಿದೆ.

ಸುಮಾರು ನಲವತ್ತೈದು ವರ್ಷಗಳ ಹಿಂದಿಯೇ ಈ ವಿಗ್ರಹಗಳ ಕುರುಹು ಪತ್ತೆಯಾಗಿತ್ತು. ನಂದಿಯ ತಲೆ ಭಾಗ ಮಾತ್ರ ಪತ್ತೆಯಾಗಿತ್ತು. ಸದ್ಯ ಸಂಪೂರ್ಣ ವಿಗ್ರಹಗಳ ಉತ್ಖನನ ಕಾರ್ಯ ನಡೆದಿದೆ. ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಮಣ್ಣಿನಲ್ಲಿ ಹುದುಗಿದ್ದ ನಂದಿ ವಿಗ್ರಹಗಳನ್ನು ಮೇಲಕ್ಕೆ ತರುವ ಕೆಲಸ ಮಾಡಿದ್ದಾರೆ.

ಈ ಜಾಗಕ್ಕೆ ಮೈಸೂರು ಸಂಸ್ಥಾನದ ಮಹಾರಾಜ ಚಾಮರಾಜ ಒಡೆಯರ್ ಭೇಟಿ ನೀಡುತ್ತಿದ್ದರು. ಹಿಂದೆ ಚಾಮರಾಜ ಒಡೆಯರ್ ಸ್ವತಃ ವಿಗ್ರಹಗಳ ಮೇಲೆತ್ತಲು ಪ್ರಯತ್ನಿಸಿದ್ದ ಬಗ್ಗೆಯೂ ದಾಖಲೆಗಳಿವೆ ಎಂದು ಹೇಳಲಾಗಿದೆ.

ಈ ವಿಗ್ರಹಕ್ಕೆ ನಲವತ್ತು ವರ್ಷದಿಂದ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾ ಬಂದಿದ್ದರು. ಅಲ್ಲದೇ ಇದರ ಜೊತೆಗೆ ಹದಿನೈದು ಬೇರೆ ಬೇರೆ ವಿಗ್ರಹಗಳು ಪತ್ತೆಯಾಗಿದ್ದು ಇತಿಹಾಸದ ಕತೆ ಹೇಳುತ್ತಿವೆ. ಈಗ ಗ್ರಾಮಸ್ಥರೇ ಮುಂದಾಗಿ ವಿಗ್ರಹ ಮೇಲೆತ್ತುವ ಮಾದರಿ ಕೆಲಸ ಮಾಡಿದ್ದಾರೆ.