ಬೆಂಗಳೂರು(ಜೂ:26) : ನಾಡಗೀತೆ ಹಾಡುವ ಸಮಯವನ್ನು ಕಡಿತಗೊಳಿಸುವಂತೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಇನ್ನು ಮುಂದೆ ನಾಡಗೀತೆಯನ್ನು 2.30 ನಿಮಿಷದಲ್ಲಿ ಹಾಡಬೇಕೆಂಬ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ. ಕನ್ನಡ ಸಾಹಿತ್ಯ ಪರಿಷತ್ ಸಲ್ಲಿಸಿದ್ದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದ್ದು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

‘ಜಯ ಭಾರತ ಜನನಿಯ ತನುಜಾತೆ’ ಹಾಡುವ ಅವಧಿಯನ್ನು 2.30 ನಿಮಿಷಕ್ಕೆ ನಿಗದಿ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು, ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ನಾಡಗೀತೆಯ ಯಾವುದೇ ಸಾಲುಗಳಿಗೆ ಕತ್ತರಿ ಹಾಕದೆ, ಹಿನ್ನಲೆ ಸಂಗೀತದ ಅವಧಿಯ ಕಡಿಮೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿತ್ತು. ಸರ್ಕಾರ ಈ ಕುರಿತು ಅಧಿಕೃತ ಆದೇಶವನ್ನು ಶೀಘ್ರದಲ್ಲಿಯೇ ಹೊರಡಿಸಲಿದೆ.

2014ರಲ್ಲಿಯೂ ಸಹ ನಾಡಗೀತೆ ಹಾಡುವ ಅವಧಿಯನ್ನು ಕಡಿತಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆಗ ಸಾಹಿತಿ ಚನ್ನವೀರ ಕಣವಿ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಿತಿ ನಾಡಗೀತೆ ಹಾಡುವ ಅವಧಿಯನ್ನು 1.50 ನಿಮಿಷಕ್ಕೆ ಇಳಿಸುವಂತೆ ಶಿಫಾರಸ್ಸು ಮಾಡಿತ್ತು.