ಕೊಡಗು(ಜೂ:12): ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್‌. ವಿಶ್ವನಾಥ್‌ ನೀಡಿದ್ದ ರಾಜೀನಾಮೆ ಕೊನೆಗೂ ಅಂಗೀಕಾರವಾಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದೆ ಎಂದು ಸ್ವತಃ ವಿಶ್ವನಾಥ್​ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ನನ್ನ ರಾಜೀನಾಮೆ ಅಂಗೀಕಾರವಾಗಿದೆ. ನಾನು ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವೆ. ನಿಖಿಲ್ ಕುಮಾರಸ್ವಾಮಿ ಕೂಡ ರಾಜ್ಯಾಧ್ಯಕ್ಷರಾಗಲು ಸಮರ್ಥರಾಗಿದ್ದಾರೆ. ಜೆಡಿಎಸ್‌ನಲ್ಲಿ ಎರಡು ಸಚಿವ ಸ್ಥಾನ ಖಾಲಿ ಇದೆ. ಒಬ್ಬ ದಲಿತರಿಗೆ ಅಥವಾ ಅಲ್ಪಸಂಖ್ಯಾತರಿಗೆ ಸಚಿವಸ್ಥಾನ ನೀಡಬೇಕು ಎಂದು ಹೇಳಿದ್ದಾರೆ.

ನಮ್ಮದು ಜಾತ್ಯತೀತ ಪಕ್ಷ, ಹಾಗಾಗಿ ಎಲ್ಲಾ ಜಾತಿಯವರನ್ನು ಪರಿಗಣನೆ ಮಾಡಬೇಕು. ಇದಕ್ಕೆ ನರೇಂದ್ರ ಮೋದಿ, ಯಡಿಯೂರಪ್ಪ ಉದಾಹರಣೆಯಾಗಿದ್ದಾರೆ. ಮಾಧ್ಯಮದವರ ಮೇಲಿನ ಹಲ್ಲೆಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು , ಮಾಧ್ಯಮದವರು ತೋರಿಸಬಾರದನ್ನು ತೋರಿಸಿಲ್ಲ. ಮುಖ್ಯಮಂತ್ರಿಗಳು ಹೇಳಬಾರದನ್ನು ಹೇಳಿಲ್ಲ. ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕು. ರಾಜ್ಯ ರಾಜಕಾರಣ ಮಲಿನವಾಗಿದೆ. ಸಮಾನ ಮನಸ್ಕರು ಕೂತು ಚರ್ಚೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.