ಬೆಂಗಳೂರು (ಜ.18): ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದ ಪಂಚಭಾಷಾ ನಟ ಈಗ ತಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿಳ್ಳುವ ಮೂಲಕ ರಾಜಕೀಯಕ್ಕೆ ಧುಮುಕಿದ್ದಾರೆ.

ರಾಜಕೀಯ ಪ್ರವೇಶದ ಕುರಿತು ಮೊದಲ ಬಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರೈ, ಜನರ ಆಶೋತ್ತರಗಳು ಈಡೇರಿಸಲು ರಾಜಕೀಯ ಸೂಕ್ತ ಮಾರ್ಗ, ಇದಕ್ಕಾಗಿ ನಾನು ಚುನಾವಣಾ ಕಣಕ್ಕೆ ಇಳಿದಿದ್ದೇನೆ ಎಂದು ಹೇಳಿದ್ದಾರೆ.

ನಾನು ಬೆಂಗಳೂರು ಸೆಂಟ್ರಲ್‍ನಿಂದ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದೇನೆ, ನಾನು ಹುಟ್ಟಿ ಬೆಳೆದಿದ್ದು , ಓದಿದ್ದು ಎಲ್ಲವೂ ಇದೇ ಕ್ಷೇತ್ರದಲ್ಲಿ. ಸಿನಿಮಾ ಜಗತ್ತು ಗಾಂಧಿನಗರ ಬರುವುದು ಇದೇ ಕ್ಷೇತ್ರದಲ್ಲಿ. ಇಲ್ಲಿ ನನ್ನ ಸಾಕಷ್ಟು ನೆನಪುಗಳಿವೆ. ಅದಕ್ಕಾಗಿ ನಾನು ಬೆಂಗಳೂರು ಸೆಂಟ್ರಲ್‍ನಿಂದ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಆರು ತಿಂಗಳು ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ರಾಜಕೀಯದಲ್ಲಿ ನಿರತವಾಗುತ್ತೇನೆ. ದೇಶಕ್ಕಾಗಿ ಯಾರು ಏನು ಮಾಡುತ್ತಿಲ್ಲ. ಎಲ್ಲರೂ ಕಳ್ಳರೇ. ಇವರಿಗೆ ನಾಚಿಕೆ ಆಗಬೇಕು. ಎಷ್ಟು ದಿನ ಈ ದೊಂಬರಾಟ ನೋಡುವುದು. ನಾವೇ ಈ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಹೇಳಿದ್ದಾರೆ.

ಇನ್ನು ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿರು ಅವರು, ಚುನಾವಣೆಗೆ ಇನ್ನು ಮೂರು ತಿಂಗಳು ಸಮಯವಿದ್ದು, ಇದಕ್ಕಾಗಿ ನಾನು ಇನ್ನು ತಯಾರಾಗಬೇಕು ಎಂದು ಹೇಳಿದ್ದಾರೆ.