ನವದೆಹಲಿ(ಫೆ:11): ಆಂಧ್ರಪ್ರದೇಶಕ್ಕೆ ವಿಶೇಷವಾದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಪ್ರಧಾನಿ ಅವರು ಆಂಧ್ರಪ್ರದೇಶದ ಜನರ ಹಣವನ್ನು ಕದ್ದು ಆ ಹಣವನ್ನು ಉದ್ಯಮಿ ಅನಿಲ್ ಅಂಬಾನಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ದೆಹಲಿಯ ಆಂಧ್ರ ಭವನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಚಂದ್ರಬಾಬು ನಾಯ್ಡು ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ರಾಹುಲ್ ಗಾಂಧಿ,ಪ್ರಧಾನಿಯವರು ಎಲ್ಲೇ ಹೋದರೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ,ಅಗತ್ಯಕ್ಕಿಂತ ಹೆಚ್ಚು ಹಣದ ನೆರವು ನೀಡಲಾಗಿದೆ ಎಂದು ಸುಳ್ಳು ಹೇಳುತ್ತಾರೆ,ನಾನು ಈ ಸಂದರ್ಭದಲ್ಲಿ ಸ್ಪಷ್ಟಪಡಿಸುವುದೇನೆಂದರೆ ಎಲ್ಲರೂ ಒಗ್ಗೂಡಿದ್ದೇವೆ,ನಾವೆಲ್ಲರೂ ಬಿಜೆಪಿಯನ್ನು ಸೋಲಿಸಿ ಮೋದಿಗೆ ತಕ್ಕ ಪಾಠ ಕಲಿಸುತ್ತೇವೆ,ಭಾರತೀಯ ವಾಯುಪಡೆಯಿಂದ 30,000 ಕೋಟಿ ರೂ. ಗಳನ್ನು ಕಳವು ಮಾಡಿ ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂದು ತಮ್ಮ ಟ್ವಿಟ್ಟರ್ ನಲ್ಲೂ ವಾಗ್ದಾಳಿ ನಡೆಸಿದ್ದಾರೆ.