ಬೆಂಗಳೂರು(ಜುಲೈ.26) ರಾಜ್ಯದ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಂತ ಅತೃಪ್ತ ಶಾಸಕರಾದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಹಳ್ಳಿ ಹಾಗು ಆರ್. ಶಂಕರ್ ರನ್ನು ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್ ಅನರ್ಹತೊಳಿಸಲು ​ ಆದೇಶ ಹೊರಡಿಸಿದ್ದಾರೆ.

ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಬೆಂಬಲ ನೀಡಿ, ಬಳಿಕ ಅದನ್ನು ಹಿಂಪಡೆದು ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಪಕ್ಷೇತರ ಶಾಸಕ ಆರ್​. ಶಂಕರ್​ ಅವರನ್ನೂ ಅನರ್ಹಗೊಳಿಸಿರುವುದಾಗಿ ಹೇಳಿದರು.

ಸಂವಿಧಾನದ 10ನೇ ವಿಧಿ ಪ್ರಕಾರ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಹಳ್ಳಿ ಮತ್ತು ಆರ್​. ಶಂಕರ್​ ಅವರನ್ನು ಅನರ್ಹಗೊಳಿಸಲಾಗಿದೆ. 2023ರವರೆಗೆ ಅಂದರೆ 15ನೇ ವಿಧಾನಸಭೆ ಅವಧಿ ಮುಕ್ತಾಯವಾಗುವವರೆಗೆ ಇವರು ಯಾವುದೇ ರೀತಿಯಲ್ಲೂ ಶಾಸನ ಸಭೆಯನ್ನು ಪ್ರವೇಶಿಸುವಂತಿಲ್ಲ ಎಂದು ಹೇಳಿದರು.

ಇದರ ಪ್ರಕಾರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಈ ಮೂವರಿಗೂ ಅವಕಾಶ ಇರುವುದಿಲ್ಲ. ಉಳಿದ 13 ಶಾಸಕರ ರಾಜೀನಾಮೆ ಕುರಿತು ಇನ್ನು ಕೆಲವೇ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.