ಬೆಂಗಳೂರು(ಜೂನ್.28) ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಕೈಗಾರಿಕಾ ಅಭಿವೃದ್ಧಿ ದೃಷ್ಟಿಯಿಂದ ತುಮಕೂರಿನವರೆಗೂ ಮೆಟ್ರೋ ಹಾಗೂ ಸಬರ್ಬನ್ ರೈಲನ್ನು ವಿಸ್ತರಿಸಲು ಚಿಂತನೆಯು ನಡೆದಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪಮೇಶ್ವರ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಬೆಂಗಳೂರಿನ ಜೊತೆಗೆ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ತುಮಕೂರಿನಲ್ಲಿ ಏಷ್ಯಾದಲ್ಲೇ ದೊಡ್ಡದಾದ ಕೈಗಾರಿಕಾ ಪ್ರದೇಶವನ್ನು ನಿರ್ಮಿಸಲಾಗುತ್ತಿದೆ. ಸುಮಾರು 80 ಸಾವಿರ ಎಕರೆ ಇದಕ್ಕೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಅದರಲ್ಲಿ ಈಗಾಗಲೇ ಮೂರ್ನಾಲ್ಕು ಸಾವಿರ ಎಕರೆ ಅಭಿವೃದ್ಧಿ ಪಡಿಸಿ ಕೈಗಾರಿಕೆಗಳಿಗೆ ಹಸ್ತಾಂತರಿಸಲಾಗಿದೆ.

ಎರಡನೇ ಹಂತದ ನಗರಗಳ ಪೈಕಿ ಬಳ್ಳಾರಿಯಲ್ಲಿ ಜೀನ್ಸ್ ಬಟ್ಟೆಗಳ ತಯಾರಿಕೆ ಎಚ್ಚಾಗಿದೆ. ಆ ಜಿಲ್ಲೆಯಲ್ಲಿ ಜೀನ್ಸ್ ಕ್ಲಸ್ಟರ್ ಗುರುತಿಸಲಾಗಿದೆ. ಕೊಪ್ಪಳದ ಆಟಿಕೆಗಳ ತಯಾರಿಕೆಗೆ ಕ್ಲಸ್ಟರ್ ನಿರ್ಮಿಸಲಾಗಿದ್ದು, ಈಗಾಗಲೇ 10 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. ತುಮಕೂರಿನಲ್ಲಿ ಕ್ರೀಡಾ ಸಾಮಾಗ್ರಿಗಳ ಕ್ಲಸ್ಟರ್ ಮತ್ತು ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಚಿಂತನೆ ಮಾಡಲಾಗಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.