ಮಂಡ್ಯ(ಜೂ,18): ನಮ್ಮನ್ನು ಕ್ಷಮಿಸಿ ಬಿಡಿ, ಇನ್ಮುಂದೆ ನಿಮ್ ಜೊತೆ ಇರ್ತೀವಿ. ನಾವು ಸ್ವಾಭಿಮಾನಿಗಳಿಗೆ ವೋಟ್ ಹಾಕಿ ತಪ್ಪು ಮಾಡಿದ್ದೇವೆ ಎಂದು ಮಂಡ್ಯದ ಜನರು ಸಿಎಂ ಕುಮಾರಸ್ವಾಮಿ ಮುಂದೆ ಕಣ್ಣಿರಿಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲ್ಲೂಕಿನ ಆಘಲಯ ಗ್ರಾಮದಲ್ಲಿ ರೈತ ಸುರೇಶ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುರೇಶ್ ಅವರ ಮನೆಗೆ ಕುಮಾರಸ್ವಾಮಿ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ ಚೆಕ್ ವಿತರಿಸಿದ್ದಾರೆ.

ಆ ವೇಳೆ ದಾರಿಯುದ್ದಕ್ಕೂ ರೈತರು ಸಿಎಂ ನ್ನು ತಡೆದು ನಿಲ್ಲಿಸಿ, ಅಣ್ಣಾ ನಾವು ವೋಟ್ ಹಾಕಿ ತಪ್ಪು ಮಾಡಿದ್ವಿ ಅಣ್ಣಾ. ನಮ್ಮನ್ನು ಕ್ಷಮಿಸಿ ಬಿಡಿ ಎಂದು ಸಿಎಂ ಮುಂದೆ ಗಳಗಳ್ಳನೆ ಮಂಡ್ಯ ಜನರು ಅತ್ತಿದ್ದಾರೆ.

ಸ್ವಾಭಿಮಾನಿಗಳು ಎಂದು ಹೇಳಿಕೊಂಡು ವೋಟ್ ಹಾಕಿಸಿಕೊಂಡು ಗೆದ್ದವರು ರೈತ ಸತ್ತಾಗ ಬಂದಿಲ್ಲ, ರೈತನ ಅಂತ್ಯಕ್ರಿಯೆಗೂ ಬಂದಿಲ್ಲ, ರೈತನ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಲಿಲ್ಲ ಎಂದು ಪರೋಕ್ಷವಾಗಿ ಸುಮಲತಾ ವಿರುದ್ದ ಮಂಡ್ಯ ಜನರು ಕಿಡಿಕಾರಿದ್ದಾರೆ.

ಮಂಡ್ಯದ ಜನರ ಮಾತು ಕೇಳಿ ಬಾವುಕರಾದ ಸಿಎಂ ನಿಮ್ಮೊಂದಿಗೆ ನಾನು ಯಾವಾಗಲೂ ಇದ್ದೇ ಇರ್ತೇನೆ. ಚಿಂತೆ ಮಾಡಬೇಡಿ. ನಿಮ್ಮ ಕಷ್ಟಗಳಿಗೆ ಯಾರು ಆಗದೇ ಇದ್ರೂ ನಾನು ಸ್ಪಂದಿಸುತ್ತೇನೆ ಎಂದು ರೈತರಿಗೆ ಧೈರ್ಯ ತುಂಬಿದ್ದಾರೆ.

ಇನ್ನು ರೈತ ಸುರೇಶ್ ಹೇಳಿದ್ದ ಕೆರೆಗಳ ಪರಿಸ್ಥಿತಿಯನ್ನೂ ಪರಿಶೀಲಿಸಿದ ಸಿಎಂ ಖಾಲಿಯಾಗಿರೋ ಕೆರೆಗಳಿಗೆ ತಕ್ಷಣವೇ ನೀರು ಹರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.