ಹೈದರಾಬಾದ್(ಫೆ.28): ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಗೆ ಭಾರತೀಯ ಸೇನೆ ಈಗಾಗಲೇ ಪ್ರತೀಕಾರ ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತೀಯ ಯುದ್ಧ ವಿಮಾನಗಳು ಅಲ್ಲಿರುವ ಉಗ್ರರ ಅಡಗು ತಾಣಗಳನ್ನು ನಾಶ ಮಾಡಿವೆ. ಈ ಮೂಲಕ ಸರ್ಜಿಕಲ್ ಸ್ಟ್ರೈಕ್ ನಡೆಸುವಲ್ಲಿ ಭಾರತ ಯಶಸ್ವಿಯಾಗಿದೆ.

ಇದೀಗ ಪಾಕಿಸ್ತಾನವೂ ಭಾರತದ ಮೇಲೆ ಪ್ರತಿದಾಳಿಗೆ ಸಜ್ಜಾಗಿದೆ. ಈಗಾಗಲೇ ಭಾರತದ ಮೇಲೆ ಬಾಂಬ್ ಹಾಕಿ ಇಲ್ಲಿಂದ ಕಾಲ್ಕಿತ್ತಿದೆ. ಎರಡು ಉಭಯ ದೇಶಗಳ ನಡುವೇ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ.

ಈ ಕುರಿತು ನೊಬೆಲ್ ಪುರಸ್ಕೃತ ಸಾಮಾಜಿಕ ಕಾರ್ಯಕರ್ತೆ ಮಲಾಲಾ ಯೂಸಫ್ ಝಾಯಿ, ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಪಾಕ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಬೇಸರವಾಗಿದೆ. ಉಭಯ ರಾಷ್ಟ್ರಗಳ ಪ್ರಧಾನಿಗಳು ಒಟ್ಟಿಗೆ ಕುಳಿತು ಮಾತನಾಡಬೇಕು ಎಂದು ಸಲಹೆ ನೀಡಿದ್ದಾರೆ.

ನಮ್ಮ ಈಗಿನ ಪರಿಸ್ಥಿತಿಗೆ ಯುದ್ಧವೇ ಕಾರಣ. ಸೇಡಿನಿಂದ ಶಾಂತಿ ಯಾವಾಗಲೂ ಸಾಧ್ಯವಿಲ್ಲ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಭಾರತದ ಸಹವರ್ತಿ ಮೋದಿ ಅವರು ಕೈ ಕುಲುಕಿ ಒಟ್ಟಿಗೆ ಕುಳಿತು ಮಾತನಾಡಬೇಕು ಎಂದು ಮಲಾಲ ಟ್ವೀಟ್ ಮಾಡಿದ್ದಾರೆ.