ನವದೆಹಲಿ(ಜ,12): ಲೋಕಸಭೆ ಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ತುದಿಗಳಲ್ಲಿ ನಿಂತಿವೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಒಂದಾಗಿ ಲೋಕಸಭೆ ಚುನಾವಣೆಯನ್ನು ನಡೆಸಲು ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ಪಿ ಪಕ್ಷದ ಮಾಯಾವತಿ ” 1993ರಲ್ಲಿ ಕಾನ್ಶಿರಾಮ್ ಹಾಗೂ ಮುಲಾಯಂ ಸಿಂಗ್ ಯಾದವ್ ಒಂದಾಗಿದ್ದರು. ಆದರೆ ಹಲವು ಕಾರಣಗಳಿಂದ ಮೈತ್ರಿ ಮುಂದುವರಿಯಲಿಲ್ಲ, ಈಗ ಮತ್ತೆ ಒಂದಾಗಿದ್ದಾರೆ. ಉತ್ತರ ಪ್ರದೇಶ 80 ಲೋಕಸಭಾ ಸೀಟುಗಳನ್ನು ಹೊಂದಿದೆ, ಒಂದು ವೇಳೆ ಬಿಎಸ್ಪಿ-ಎಸ್ಪಿ ಮೈತ್ರಿಕೂಟವು ಬಹುಮತದಿಂದ ಗೆಲುವನ್ನು ಸಾಧಿಸಿದ್ದೆ ಆದಲ್ಲಿ, ನಾವು ಮುಂಬರುವ ಲೋಕಸಭೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಇದು ದೇಶದಲ್ಲಿ ದೊಡ್ಡ ರಾಜಕೀಯ ಕ್ರಾಂತಿಯಾಗಲಿದೆ ಎಂದ ಅವರು, ನಮ್ಮ ಈ ಮೈತ್ರಿಯ ಸುದ್ದಿ ಕೇಳಿ ಮೋದಿ ಹಾಗೂ ಅಮಿತ್ ಶಾ ಹಲವು ದಿನಗಳ ಕಾಲ ನಿದ್ದೆ ಕಳೆದುಕೊಳ್ಳಲಿದ್ದಾರೆ ಎಂದು ಮಾಯಾವತಿ ಬಿಜೆಪಿ ನಾಯಕರನ್ನು ಅಣುಕಿಸಿದ್ದಾರೆ.

ಲಖನೌನ ಪಂಚತಾರಾ ಹೋಟೆಲ್‍ನಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಾರ್ಟಿ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೈತ್ರಿ ಘೋಷಣೆ ಮಾಡಿದ್ದು, ಸೀಟು ಹಂಚಿಕೆ ವಿಚಾರವಾಗಿ ಇಬ್ಬರೂ ನಾಯಕರು ಈಗಾಗಲೇ ಮಾತುಕತೆ ಪೂರ್ಣಗೊಳಿಸಿದ್ದಾರೆ. ಇನ್ನು, ಕಾಂಗ್ರೆಸ್ ಅನ್ನು ಮೈತ್ರಿಯಿಂದ ದೂರವಿಟ್ಟಿದ್ದರೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸಂಸದರಾಗಿರುವ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಎರಡು ಸ್ಥಾನ ನೀಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಎಸ್ಪಿ-ಬಿಎಸ್ಪಿ ಎರಡೂ ಮೈತ್ರಿ ಮಾಡಿಕೊಳ್ಳುತ್ತವೆ ಎನ್ನುವುದು ಕನಸಿನ ವಿಚಾರವಾಗಿತ್ತು, ಆದರೆ ಈಗ ಲಕ್ನೋದಲ್ಲಿ ಐತಿಹಾಸಿಕ ಪತ್ರಿಕಾಗೋಷ್ಠಿ ನಡೆಸುವುದರ ಮೂಲಕ ಉಭಯ ಪಕ್ಷಗಳ ನಾಯಕರು 38-38 ಸ್ಥಾನದ ಸೂತ್ರದ ಅನುಗುಣವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದು, ಕೇಂದ್ರದಲ್ಲಿ ಬಿಜೆಪಿಯನ್ನು ಮಣಿಸಲು ಸಿದ್ಧವಾಗಿವೆ ಎನ್ನಬಹುದು