ಲಕ್ನೋ(ಮಾ,12): ಲೋಕಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದ್ದು, ಯಾವುದೇ ರಾಜ್ಯದಿಂದಲೂ ನಾವು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸಲು ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಜೊತೆಗೆ ಕೈಜೋಡಿಸಿದ್ದೇವೆ. ಈ ಮೈತ್ರಿ ಬಿಜೆಪಿಯನ್ನು ಸೋಲಿಸಲು ಪರಿಪೂರ್ಣ ಶಕ್ತಿ ಹೊಂದಿದೆ. ಚುನಾವಣೆ ಉದ್ದೇಶದಿಂದ ಮೈತ್ರಿಯನ್ನು ಮಾಡಿಕೊಂಡರೆ ಪಕ್ಷದ ಸಿದ್ಧಾಂತ, ಹೋರಾಟಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಎಸ್‍ಪಿ ಹೊರತಾಗಿ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಇಲ್ಲವೆಂದು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎಗೆ 2019ರ ಚುನಾವಣೆಯಲ್ಲಿ ಬಹುಮತ ಸಿಗಬಾರದು ಎನ್ನುವುದು ಬಿಜೆಪಿ ವಿರೋಧಿ ಪಕ್ಷಗಳ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪಕ್ಷಗಳ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ ಎಂದಿದ್ದಾರೆ.

ಆಮ್ ಆದ್ಮಿ ಪಾರ್ಟಿ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮೊನ್ನೆಯಷ್ಟೇ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲವೆಂದು ಸ್ಪಷ್ಟಪಡಿಸಿದರು. ದೆಹಲಿ ಲೋಕಸಭಾ ಕ್ಷೇತ್ರಗಳ ಮೈತ್ರಿಯಲ್ಲಿ ಕಾಂಗ್ರೆಸ್ ಅಹಂಕಾರ ತೋರಿದೆ. ಹೀಗಾಗಿ ಕಾಂಗ್ರೆ ಸ್ ನ ಅಭ್ಯರ್ಥಿಗಳು ಠೇವಣಿ ಹಣವನ್ನು ಕಳೆದುಕೊಳ್ಳುತ್ತಾರೆ ಎಂದು ಕಿಡಿಕಾರಿದ್ದರು.