ಬೆಂಗಳೂರು(ಮಾ,14): ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.

ಕಿಡ್ನಿವೈಫಲ್ಯ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಾತೆ ಮಹಾದೇವಿ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಂಗಳೂರು ಎಚ್‍ಎಎಲ್ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಲಿಂಗಾನಂದ ಮಹಾಸ್ವಾಮಿಗಳಿಂದ ಇಷ್ಟಲಿಂಗ ಧೀಕ್ಷೆ ಪಡೆದಿದ್ದ ಅವರ 1946ರ ಮಾರ್ಚ್ 13ರಂದು ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಜನಿಸಿದ್ದರು. ಪ್ರಥಮ ಮಹಿಳಾ ಜಗದ್ಗುರು ಎಂಬ ಖ್ಯಾತಿಗೆ ಪಾತ್ರರಾಗಿದ್ದ ಇವರು, ಪ್ರತಿ ವರ್ಷ ಶರಣ ಸಮ್ಮೇಳನ ಆಯೋಜನೆ ಮಾಡುತ್ತಿದ್ದರು. ಕೂಡಲಸಂಗಮ, ಬಸವಕಲ್ಯಾಣದಲ್ಲಿ ಕಾರ್ಯಕ್ರಮ ಆಯೋಜಿಸಿ, ಶರಣ ಧರ್ಮ ಪ್ರಚಾರದಲ್ಲಿ ಸಕ್ರಿಯರಾಗಿದ್ದರು. ಲಿಂಗಾನಂದ ಮಹಾಸ್ವಾಮಿಗಳಿಂದ ಇಷ್ಟಲಿಂಗ ಧೀಕ್ಷೆ ಪಡೆದಿದ್ದರು.

ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ, ಮೊದಲ ಮಹಿಳಾ ಜಗದ್ಗುರು ಪೀಠ ಸ್ಥಾಪನೆ, ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ, ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ಅವರ ಸಾಧನೆಗಳಲ್ಲೊಂದು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ನೇತೃತ್ವ ವಹಿಸಿದ್ದು ಮಾತೆ ಮಹಾದೇವಿಯವರು. ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯುವವರೆಗೂ ಹೋರಾಟ ನಡೆಸುವುದಾಗಿ ಮಹಾದೇವಿ ಹೇಳಿದ್ದರು.