ಲಕ್ನೋ(ಜ.14): ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ(ಎಸ್.ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿ.ಎಸ್.ಪಿ)ಒಂದಾಗಿ ಲೋಕಸಭೆ ಚುನಾವಣೆಯನ್ನು ಎದುರಿಸಲು ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ರಾಷ್ಟ್ರೀಯ ಜನತಾ ದಳ (ಆರ್.ಜೆ.ಡಿ) ನಾಯಕ ಮತ್ತು ಮಾಜಿ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರು ಭಾನುವಾರ ಲಕ್ನೋದಲ್ಲಿ ಬಿ.ಎಸ್.ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಭೇಟಿಯಾಗಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಗೆ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ತೇಜಸ್ವಿ, ಮಾಯಾವತಿ ಅವರನ್ನು ಭೇಟಿಯಾಗಿದ್ದು, ಸದ್ಯದಲ್ಲಿಯೇ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಲಿಧ್ದಾರೆ ಎನ್ನಲಾಗಿದೆ.

ತೇಜಸ್ವಿ ಮಾಯಾವತಿ ಅವರನ್ನು ಭಾನುವಾರ ರಾತ್ರಿ ಅವರ ನಿವಾಸದಲ್ಲಿ ಭೇಟಿಯಾಗಿ ದೇಶದಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ.

ಮಾಯಾವತಿ ಭೇಟಿಗೆ ಮೊದಲು ಲಕ್ನೋ ವಿಮಾನ ನಿಲ್ದಾಣದಲ್ಲಿ ವರದಿಗಾರರ ಜೊತೆ ಮಾತನಾಡಿದ ತೇಜಸ್ವಿ, ಲಾಲುಜೀ ಬಿ.ಎಸ್.ಪಿ ಮತ್ತು ಎಸ್.ಪಿ ಮೈತ್ರಿಯನ್ನು ಬಯಸಿದ್ದರು ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗುಳಿಸಲು ಎಲ್ಲಾ ಅಂಗ ಪಕ್ಷಗಳು ಸಜ್ಜಾಗಿದ್ದು, ಮುಂದಿನ ಚುನಾವಣೆ ಭಾರೀ ಕುತೂಹಲವನ್ನು ಮೂಡಿಸಿದೆ.