ಬೆಂಗಳೂರು(ಜೂ:10): ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕನ್ನಡದ ಮೇರು ನಾಟಕಕಾರ, ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. ಬಹು ದಿನಗಳಿಂದ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಲ್ಯಾವೆಲ್ಲೆ ರೋಡ್‌ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಾಹಿತ್ಯ ಲೋಕ, ಚಿತ್ರರಂಗ ಹಾಗೂ ರಂಗಭೂಮಿ ಕಲಾವಿದರು, ರಾಜಕಾರಣಿಗಳು, ಗಿರೀಶ್​ ಕಾರ್ನಾಡ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ಕಾರ್ನಾಡ್ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಯಾವುದೇ ವ್ಯವಸ್ಥೆಯನ್ನು ಏರ್ಪಡಿಸಲಾಗಿಲ್ಲ. ಕಾರ್ನಾಡ್​ ಅವರ ಕುಟುಂಬಸ್ಥರು, ಯಾರೂ ಅಪಾರ್ಟ್ ಮೆಂಟ್ ಬಳಿ ಬಾರದಂತೆ ಮನವಿ ಮಾಡಿದ್ದಾರೆ. ಮನೆಯ ಬಳಿ ಸಾಕಷ್ಟು ಜನರು ಸೇರಿದರೆ ತೊಂದರೆ ಆಗುತ್ತದೆ ಎಂಬ ಉದ್ದೇಶದೊಂದಿಗೆ ಈ ಬೇಡಿಕೆ ಇಟ್ಟಿದ್ದಾರೆ.

ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೇ ಕಾರ್ನಾಡ್ ಅವರ ಅಂತ್ಯಕ್ರಿಯೆಯನ್ನು ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿರುವ ಕುಟುಂಬಸ್ಥರು ಬೆಂಗಳೂರಿನ ಬೈಯಪ್ಪನಹಳ್ಳಿಯ ಕಲ್ಲಪ್ಪಳ್ಳಿ ರುದ್ರಭೂಮಿಯಲ್ಲಿ ಇಂದು ಸಂಜೆ ಅಂತ್ಯಕ್ರಿಯೆಯನ್ನು ನಡೆಸಲು ತೀರ್ಮಾನಿಸಿದ್ದಾರೆ, ಅಲ್ಲೇ ಅಂತಿಮ ದರ್ಶನಕ್ಕೂ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.