ಕೊಡಗು(ಜು:08): ಸರ್ಕಾರ ಉಳಿಸುವ ನಿಟ್ಟಿನಲ್ಲಿ ಜೆಡಿಎಸ್‌ ಮುಖಂಡರು ಯೋಜನೆ ರೂಪಿಸಿದ್ದು, ತಮ್ಮ ಪಕ್ಷದ ಶಾಸಕರನ್ನು ಕೊಡಗಿನ ರೆಸಾರ್ಟ್‌ಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ 7ನೇ ಹೊಸಕೋಟೆಯ ಪ್ಯಾಡಿಂಗ್‌ಟನ್ ರೆಸಾರ್ಟ್‌ನಲ್ಲಿ 35 ರೂಂ ಬುಕ್‌ ಮಾಡಲಾಗಿದ್ದು, ಸ್ವತಃ ರೆಸಾರ್ಟ್‌ ಮಾಲೀಕರೇ, 35 ಕೊಠಡಿ ಕಾಯ್ದಿರಿಸುವಂತೆ ರೆಸಾರ್ಟ್‌ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಹೀಗಾಗಿ, ಸೋಮವಾರ ಬೆಳಿಗ್ಗೆಯಿಂದ ಯಾವ ಪ್ರವಾಸಿಗರಿಗೂ ಕೊಠಡಿಗಳನ್ನು ನೀಡುತ್ತಿಲ್ಲ ಎಂಬುದು ತಿಳಿದುಬಂದಿದೆ.

ಸಾ.ರಾ.ಮಹೇಶ್ ಕೊಡಗು ಉಸ್ತುವಾರಿ ಆಗಿರುವ ಕಾರಣ ತಮ್ಮ ಪಕ್ಷದ ಶಾಸಕರ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆಯೆಂದು ಈ ರೆಸಾರ್ಟ್‌ ಆಯ್ಕೆ ಮಾಡಿಕೊಳ್ಳಲಾಗಿದೆ. ರಾಜಕೀಯ ಬೆಳವಣಿಗೆ ನೋಡಿಕೊಂಡು ಸಂಜೆ ಇಲ್ಲವೇ ರಾತ್ರಿ ವೇಳೆಗೆ ಜೆಡಿಎಸ್‌ನ ಎಲ್ಲ ಶಾಸಕರೂ ಐಷಾರಾಮಿ ರೆಸಾರ್ಟ್‌ಗೆ ತೆರಳುವ ಸಾಧ್ಯತೆಯಿದೆ. ಒಂದು ವೇಳೆ ಕೊನೆಯ ಕ್ಷಣದಲ್ಲಿ ಈ ಯೋಜನೆ ಬದಲಾದರೆ ಉಡುಪಿ ಅಥವಾ ಕೇರಳದ ರೆಸಾರ್ಟ್‌ಗೆ ತೆರಳುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.