ಶ್ರೀನಗರ (ಫೆ.18): ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭೀಕರ ದಾಳಿ ನಡೆಸಿದ ಉಗ್ರರ ವಿರುದ್ಧ ಭಾರತೀಯ ಸೇನೆ ಮೊದಲ ಪ್ರತೀಕಾರ ತೀರಿಸಿಕೊಂಡಿದೆ.

ಕಣಿವೆ ರಾಜ್ಯದಲ್ಲಿ ಸತತ 19 ಗಂಟೆಗಳ ಕಾರ್ಯಾಚರಣೆ ನಡೆಸಿ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಸೇರಿ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಈ ವೇಳೆ ನಾಲ್ಕು ಯೋಧರು ಹುತಾತ್ಮರಾಗಿದ್ದಾರೆ.

ಜೈಷ್ -ಇ-ಮೊಹ್ಮದ್ ಭಯೋತ್ಪಾದನಾ ಸಂಘಟನೆಯ ಕಮಾಂಡರ್ ಆಗಿರುವ ಅಬ್ದುಲ್ ರಶೀದ್ ಬಾಂಬ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈತ ಜೆಇಎಂ ಮುಖ್ಯಸ್ಥ ಮಸೂದ್ ಅಜರ್‍ನ ನಂಬಿಕಸ್ತ ಬಂಟನಾಗಿದ್ದ. ಎನ್ನಲಾಗಿದೆ.

ರಶೀದ್ ಘಾಜಿ ಜೊತೆ ಇದ್ದ ಕುಮ್ರಾನ್ ಕುಜ್ಜರ್ ನನ್ನು ಸೇನೆ ಹೊಡೆದುರುಳಿಸಿದೆ. ಗುರುವಾರ ನಡೆದ ಭಾರತೀಯ ಸೇನೆ ಮೇಲೆ ನಡೆದ ದಾಳಿ ಪ್ರದೇಶದಿಂದ ಕೇವಲ 10 ಕಿ.ಮೀ. ದೂರದಲ್ಲಿ ಇವರು ಅಡಗಿಕೊಂಡಿದ್ದರು.

ಪಿಂಗ್ಲಾನ್ ಭಾಗದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆ ಭಾರತೀಯ ಸೇನೆ ಭಾನುವಾರ ಕಾರ್ಯಾಚರಣೆಗೆ ಇಳಿದಿತ್ತು. ಸತತ 19 ಗಂಟೆಗಳ ಕಾಲ ಕಾರ್ಯಾಚರಣೆ ಮುಂದುವರಿದಿತ್ತು. ಸೋಮವಾರ ಬೆಳಗಿನಜಾವ ಉಗ್ರರು ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆಯಲ್ಲಿ 4 ಸೈನಿಕರು ಹುತಾತ್ಮರಾಗಿದ್ದಾರೆ. ಕೆಲ ಯೋಧರಿಗೆ ಗಾಯಗಳಾಗಿವೆ.