ನವದೆಹಲಿ(ನ.22) ವಿಶ್ವದ ಕುತೂಹಲ ಮೂಡಿಸಿದ್ದ ಚಂದ್ರಯಾನ-2 ಅಭಿಯಾನವು ಕಟ್ಟಕಡೆಯ ಕ್ಷಣದಲ್ಲಿ ವಿಫಲವಾಗಿದ್ದರೂ ಧೃತಿಗೆಡದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಚಂದ್ರಯಾನ-3ಗೆ ಸಜ್ಜಾಗಿದೆ.

ಈಗಾಗಲೇ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ-3 ನೀಲಿ ನಕ್ಷೆಯನ್ನು ಸಿದ್ಧಪಡಿಸಿದೆ. ರಾಜ್ಯಸಭೆಯಲ್ಲಿ ಅಣುಶಕ್ತಿ ಮತ್ತು ಅಂತರಿಕ್ಷ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

ಚಂದ್ರನ ಶೋಧನೆ ಕಾರ್ಯಾಚರಣೆಗೆ ಇಸ್ರೋ ನೀಲಿ ನಕ್ಷೆ ತಯಾರಿಸಿದೆ. ಅದಕ್ಕಾಗಿ ಅಗತ್ಯ ತಂತ್ರಜ್ಞಾನಗಳನ್ನು ರೂಪಿಸುತ್ತಿದೆ. ಈ ನೀಲ ನಕ್ಷೆಯನ್ನು ಅಂತರಿಕ್ಷ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದಿದ್ದಾರೆ.

ಅಂತಿಮವಾಗಿ ವಿಶ್ಲೇಷಣೆ ಮತ್ತು ತಜ್ಞರ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಮುಂದಿನ ಚಂದ್ರನ ಪರಿಶೋಧನೆ ಕಾರ್ಯಾಚರಣೆಗೆ ಕೆಲಸ ಮುಂದುವರಿಯುತ್ತಿದೆ ಎಂದು ಜಿತೇಂದ್ರ ಸಿಂಗ್ ಸದಸ್ಯರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.